ಮಂಗಳೂರು: ನಿಷೇಧಾಜ್ಞೆಯ ನಡುವೆಯೂ ಮಾರುಕಟ್ಟೆಗಳಲ್ಲಿ ಜನಜಂಗುಳಿ!

Update: 2020-03-23 07:36 GMT

ಮಂಗಳೂರು, ಮಾ.23: ರಾಜ್ಯದಲ್ಲಿ ಕೊರೋನ ಸೋಂಕು ಭೀತಿ ಹೆಚ್ಚಾಗುತ್ತಿದೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಈಗಾಗಲೇ ಜನರು ಮನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುವುದನ್ನು ತಡೆಯಲು ನಿಷೇಧಾಜ್ಞೆಯೊಂದಿಗೆ ಲಾಕ್‌ಡೌನ್ ಮಾಡಲಾಗಿದೆ. ಹಾಗಿದ್ದರೂ ಜನತೆ ಮಾತ್ರ ಇದರ ಗಂಭೀರತೆಯನ್ನು ಇನ್ನೂ ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. 

ಮಾ.31ರವರೆಗೆ ಲಾಕ್‌ಡೌನ್ ಮಾಡಲಾಗಿರುವ ರಾಜ್ಯದ 9 ಜಿಲ್ಲೆಗಳಲ್ಲಿ ದ.ಕ. ಕೂಡಾ ಒಂದಾಗಿದ್ದು, ಮಂಗಳೂರು ನಗರ ಸೇರಿದಂತೆ ಇಂದು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ಕಂಡುಬಂದಿದೆ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಿನ್ನೆ ಸ್ತಬ್ಧಗೊಂಡಿದ್ದ ಮಂಗಳೂರಿನ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಇಂದು ಕಂಡುಬಂತು. ಹೈವೇಗಳಲ್ಲಿ ವಾಹನ ಸಂಚಾರ ವಿರಳವಾಗಿದ್ದರೂ, ನಗರದ ಬಹುತೇಕ ರಸ್ತೆಗಳಲ್ಲಿ ಬಸ್ಸುಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳಲ್ಲಿ ಜನರು ಪ್ರಯಾಣಿಸುತ್ತಿದ್ದರು. ನಗರದ ಜ್ಯೋತಿ, ಕೂಳೂರು, ಕಂಕನಾಡಿ ಮೊದಲಾದ ಕರ್ತವ್ಯನಿರತ ಪೊಲೀಸರು ವಾಹನಗಳನ್ನು ತಡೆದು ವಿಚಾರಿಸುತ್ತಿದ್ದರೂ ಜನ ಸಬೂಬು ಹೇಳಿಕೊಂಡು ವಾಹನಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ.

ಲಾಕ್‌ಡೌನ್ ಮಾಡಲಾಗಿದ್ದರೂ ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಅಗತ್ಯ ಸಾಮಗ್ರಿಗಳು (ದಿನಸಿ ಸೇರಿದಂತೆ) ಜನತೆಗೆ ಲಭ್ಯವಾಗುವಂತೆ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶವಿದೆ. ಹಾಗಿದ್ದರೂ ಜನ ಮಾರುಕಟ್ಟೆ, ಅಂಗಡಿಗಳಲ್ಲಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಮುಗಿಬೀಳುವ ಮೂಲಕ ಸಾಮಾಜಿಕ ಕಳಕಳಿಯನ್ನು ಮರೆಯುತ್ತಿದ್ದಾರೆ.

ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಸ್ವಯಂ ನಿಯಂತ್ರಣೇ ಪ್ರಮುಖ ಅಸ್ತ್ರ ಎಂದು ತಜ್ಞರು ಪದೇಪದೇ ಹೇಳುತ್ತಿರುವುದಲ್ಲದೆ, ಸಾಮಾಜಿಕ ಸಾಮೀಪ್ಯದಿಂದ ದೂರವಿರುವಂತೆ ಸಲಹೆ, ಸೂಚನೆ ನೀಡುತ್ತಿದ್ದಾರೆ. ಆದರೆ ಜನರು ಮಾತ್ರ ಮಾರುಕಟ್ಟೆಯಂತಹ ಸ್ಥಳಗಳಲ್ಲಿ ಗುಂಪು ಸೇರುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ತರಕಾರಿ, ಹಣ್ಣುಹಂಪಲು ಬೆಲೆಯಲ್ಲಿ ಹೆಚ್ಚಳ!
ಮಾರುಕಟ್ಟೆಗಳಲ್ಲಿ ಇಂದು ತರಕಾರಿ, ಹಣ್ಣುಹಂಪಲುಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಜನರಿಂದ ತರಕಾರಿ, ಹಣ್ಣುಹಂಪಲು, ಮೀನು ಖರೀದಿ ಭರಾಟೆ ಹೆಚ್ಚಿದ್ದು, ಇದೇ ವೇಳೆ ತರಕಾರಿ ಹಾಗೂ ಹಣ್ಣುಹಂಪಲುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News