‘ಲಾಕ್‌ ಡೌನ್’ ನಿರ್ಲಕ್ಷಿಸಿದರೆ ಬಂಧನ: ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷ ಎಚ್ಚರಿಕೆ

Update: 2020-03-23 10:51 GMT

ಮಂಗಳೂರು, ಮಾ.23: ಕೊರೋನಾವೈರಸ್ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರವು ದ.ಕ.ಜಿಲ್ಲೆಯಲ್ಲಿ ಲಾಕ್‌ ಡೌನ್ ಘೋಷಿಸಿದೆ. ಜಿಲ್ಲಾಡಳಿತವೂ ಸೆ.144ನ್ನು ವಿಧಿಸಿದೆ. ತುರ್ತು ಕಾರ್ಯ ಹೊರತುಪಡಿಸಿ ಯಾರೂ ಹೊರಗೆ ಬರಬಾರದು. ಹಾಗಾಗಿ ಎಲ್ಲರೂ ತಮ್ಮ ಮನೆಗಳಲ್ಲೇ ಇರಬೇಕು. ಒಂದು ವೇಳೆ ಲಾಕ್‌ ಡೌನ್‌ನ್ನು ನಿರ್ಲಕ್ಷಿಸಿದರೆ ಅಂತಹವರ ವಿರುದ್ಧ ಸೆ.188, ಸೆ.269, ಸೆ.270ರ ಅನ್ವಯ ಪ್ರಕರಣ ದಾಖಲಿಸಲಾಗುವುದು. ಅಗತ್ಯವಿದ್ದರೆ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟಿರುವ ಅವರು, ಕೊರೋನ ವೈರಸ್‌ ಗೆ ಸಂಬಂಧಿಸಿ ಸರಕಾರದ ಆದೇಶವನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ. ಹಾಗಾಗಿ ಯಾರೂ ಇದನ್ನು ಲಘುವಾಗಿ ಪರಿಗಣಿಸಬಾರದು. ಈಗಾಗಲೆ ಮಸೀದಿ, ದೇವಸ್ಥಾನ, ಚರ್ಚ್‌ನಲ್ಲಿ ಪ್ರಾರ್ಥನೆಗಳನ್ನು ನಿಲ್ಲಿಸಲು ಧರ್ಮಗುರುಗಳಲ್ಲಿ ಮನವಿ ಮಾಡಿದ್ದೇವೆ. ಅವರು ಕೂಡ ಸ್ಪಂದಿಸಿದ್ದಾರೆ. ಎಲ್ಲರೂ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ ಸಮಾಜದ ಸ್ವಾಸ್ಥ ಕಾಪಾಡಲು ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಹರ್ಷ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News