​ಗ್ರಾಹಕ-ಮಾಲಕರ ನಡುವೆ ಕನಿಷ್ಟ 6 ಅಡಿಗಳ ಅಂತರ ಕಡ್ಡಾಯ : ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-03-23 12:32 GMT

ಉಡುಪಿ, ಮಾ.23: ಜಿಲ್ಲೆಯ ಇತ್ತೀಚಿನ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಕೊರೋನ ವೈರಾಣುಗಳು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಮಾ.21ರಿಂದಲೇ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ಬಾರ್‌ಗಳನ್ನು ಮುಚ್ಚಲು ಈಗಾಗಲೇ ಆದೇಶಿಸಲಾಗಿದೆ. ಮದ್ಯದ ಅಂಗಡಿ (ವೈನ್‌ಶಾಪ್) ಗಳು ತೆರೆದಿದ್ದು, ಅಲ್ಲಿ ಗ್ರಾಹಕ ಹಾಗೂ ಮಾಲಕರು ಮತ್ತು ಗ್ರಾಹಕ-ಮತ್ತೊಬ್ಬ ಗ್ರಾಹಕನ ನಡುವೆ ಕನಿಷ್ಟ ಆರು ಅಡಿಗಳ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಅಂತಹ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ರೆಸ್ಟೋರೆಂಟ್/ಉಪಹಾರ ಗೃಹ/ ಹೋಟೆಲ್/ ಕೆಫೆಗಳಲ್ಲಿ ಊಟ/ ಉಪಹಾರ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಅಡುಗೆ ಮನೆಗಳು ತೆರೆದಿದ್ದು, ಗ್ರಾಹಕರು ಆಹಾರವನ್ನು ಅಲ್ಲಿಂದ ಖರೀದಿಸಿ, ಕೇವಲ ತೆಗೆದು ಕೊಂಡು ಹೋಗಲು ಅನುಮತಿ ನೀಡಲಾಗಿದೆ. ಅಲ್ಲಿ ಗ್ರಾಹಕ-ಮಾಲಕರ ಮತ್ತು ಗ್ರಾಹಕ-ಗ್ರಾಹಕರ ನಡುವೆ ಕನಿಷ್ಟ 6 ಅಡಿಗಳ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ತಪ್ಪಿದಲ್ಲಿ ಅಂತಹ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಸಣ್ಣ-ಸಣ್ಣ ಅಂಗಡಿಗಳಲ್ಲಿ, ಉಪಹಾರ ದರ್ಶಿನಿಗಳಲ್ಲಿ, ತರಕಾರಿ ಅಂಗಡಿ, ಹಣ್ಣು ಹಂಪಲು, ದಿನಸಿ ವಸ್ತುಗಳ ಅಂಗಡಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳಲ್ಲಿ ಗ್ರಾಹಕ- ಮಾಲಕರ ಮತ್ತು ಗ್ರಾಹಕ-ಗ್ರಾಹಕರ ನಡುವೆ ಕನಿಷ್ಟ 6 ಅಡಿಗಳ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಅಂತಹ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆ ಗಳು, ಎಲೆಕ್ಟ್ರಾನಿಕ್ ಮಳಿಗೆಗಳು ಹಾಗೂ ಮತ್ತಿತರ ಮಳಿಗೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಬೇಕು. ಇತರ ಎಲ್ಲಾ ಅಂಗಡಿಗಳಲ್ಲಿ ಗ್ರಾಹಕ- ಮಾಲಕರ ಮತ್ತು ಗ್ರಾಹಕ-ಗ್ರಾಹಕನ ನಡುವೆ ಕನಿಷ್ಟ 6 ಅಡಿಗಳ ಅಂತರವನ್ನು ಕಡ್ಡಾಯ ವಾಗಿ ಕಾಯ್ದುಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು ಹಾಗೂ ಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News