ಕೊರೋನ ಭೀತಿ: ಉಡುಪಿ ಜಿಲ್ಲೆಯಾದ್ಯಂತ ಭಾಗಶಃ ಬಂದ್

Update: 2020-03-23 14:27 GMT

ಉಡುಪಿ, ಮಾ.23: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾಗಶಃ ಬಂದ್ ಮಾಡಲಾಗಿದ್ದು, ನಗರದಲ್ಲಿ ಬೆಳಗ್ಗೆಯಿಂದ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮುಂಗ್ಗಟ್ಟುಗಳನ್ನು ಉಡುಪಿ ನಗರಸಭೆ ನೀಡಿದ ಸೂಚನೆಯಂತೆ ಮಧ್ಯಾಹ್ನದ ನಂತರ ಬಂದ್ ಮಾಡಲಾಯಿತು.

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಸಿಟಿ ಬಸ್‌ಗಳು ಬೆಳಗ್ಗೆಯಿಂದಲೇ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಇದರಿಂದ ನಗರದಲ್ಲಿ ಜನ ಸಂಚಾರ ಸಾಕಷ್ಟು ವಿರಳವಾಗಿತ್ತು. ಆದರೆ ಕುಂದಾಪುರ ಹಾಗೂ ಕಾರ್ಕಳಮಾರ್ಗದಲ್ಲಿ ಬೆರಣಿಕೆಯ ಖಾಸಗಿ ಸರ್ವಿಸ್ ಬಸ್‌ಗಳು ಸಂಚರಿಸುತ್ತಿದ್ದವು. ಇದರಲ್ಲಿ ಬಹುತೇಕ ಬಸ್‌ಗಳು ಸಂಜೆಯ ನಂತರ ಸಂಚಾರವನ್ನು ಸ್ಥಗಿತಗೊಳಿದವು.

ಮಂಗಳೂರು ಬಂದ್ ಹಿನ್ನೆಲೆಯಲ್ಲಿ ಉಡುಪಿ -ಮಂಗಳೂರು ಸರ್ವಿಸ್ ಬಸ್‌ಗಳು ತಮ್ಮ ಸಂಚಾರವನ್ನು ಪಡುಬಿದ್ರೆಯವರೆಗೆ ಮಾತ್ರ ಸೀಮಿತ ಗೊಳಿಸಿದ್ದವು. ಅದೇ ರೀತಿ ಒಳ ಮಾರ್ಗದಲ್ಲಿ ಕೆಲವೇ ಕೆಲವು ಬಸ್‌ಗಳು ಸಂಚರಿಸುತ್ತಿರುವುದು ಕಂಡುಬಂತು. ವೇಗದೂತ ಬಸ್‌ಗಳು ಇಡೀ ದಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದವು.

ಉಡುಪಿ ನಗರದಲ್ಲಿ ಕೆಲವು ಅಂಗಡಿ ಮುಂಗ್ಗಟ್ಟುಗಳು ಇಂದು ಕೂಡ ಬಂದನ್ನು ಮುಂದುವರೆಸಿದ್ದವು. ಆದರೆ ಬಹುತೇಕ ಅಂಗಡಿಗಳು ತೆರೆದಿದ್ದವು. ನಗರದಲ್ಲಿ ಕೆಲವು ಚಿನ್ನದ ಮಳಿಗೆಗಳು, ಸೆಲೂನ್, ಬ್ಯೂಟಿಪಾರ್ಲರ್ ಸೇರಿದಂತೆ ವಿವಿಧ ಅಂಗಡಿ, ಕಚೇರಿಗಳು ಬಂದ್ ಆಗಿದ್ದವು. ಮಧ್ಯಾಹ್ನ ವೇಳೆ ಉಡುಪಿ ನಗರ ಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪೌರಾಯುಕ್ತ ಆನಂದ ಕಲ್ಲೋಳಿಕರ್ ನೇತೃತ್ವದಲ್ಲಿ ನಗರಾದ್ಯಂತ ಸಂಚರಿಸಿ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿವರ್ಧಕಗಳ ಮೂಲಕ ಮನವಿ ಮಾಡಿಕೊಂಡರು.

ಅದರಂತೆ ಮಧ್ಯಾಹ್ನ ನಂತರ ಚಪ್ಪಲಿ, ಜವುಳಿ ಅಂಗಡಿ ಸೇರಿದಂತೆ ಇತರ ಅಂಗಡಿಗಳು ಮುಚ್ಚಿದವು. ಆದರೆ ಅಗತ್ಯವಸ್ತುಗಳನ್ನು ಪೂರೈಸುವ ಮಿಲ್ಕ್ ಪಾರ್ಲರ್, ದಿನಸಿ ಅಂಗಡಿ, ಮೆಡಿಕಲ್, ಆಸ್ಪತ್ರೆಗಳು ತೆರೆದಿದ್ದವು. ಬೆಳಗ್ಗೆ ಯಿಂದ ಉಡುಪಿ ನ್ಯಾಯಾಲಯ ತೆರೆದಿದ್ದರೂ ಯಾವುದೇ ಕಾರ್ಯ ಕಲಾಪಗಳು ನಡೆಯಲಿಲ್ಲ ಎಂದು ತಿಳಿದುಬಂದಿದೆ.

ನಿನ್ನೆ ಜನತಾ ಕರ್ಫ್ಯೂವಿನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಜನ ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ಧಾವಿಸುತ್ತಿರುವುದು ಕಂಡು ಬಂತು. ಇದರಿಂದ ತರಕಾರಿ ಅಂಗಡಿಗಳು ಹಾಗೂ ಸೂಪರ್‌ಮಾರ್ಕೆಟ್‌ಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡು ಬಂದರು. ಮಾಲ್‌ಗಳಲ್ಲಿರುವ ಸೂಪರ್‌ಮಾರ್ಕೆಟ್‌ಗಳಲ್ಲಿ ಒಮ್ಮೆಗೆ 20 ಗ್ರಾಹಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು. ಉಳಿದವರು ಸರದಿಯಲ್ಲಿ ಕಾದು ಕುಳಿತಿರುವುದು ಕಂಡುಬಂತು. ರಾಷ್ಟ್ರೀಯ ಹೆದ್ದಾರಿ ಯಲೂ್ಲ ವಾಹನ ಸಂಚಾರ ಕಡಿಮೆಯಾಗಿತ್ತು.

ನಗರದ ವೈನ್‌ಶಾಪ್‌ಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದು, ಸ್ಥಳಕ್ಕೆ ಆಗಮಿಸಿದ ಅಬಕಾರಿ ಅಧಿಕಾರಿಗಳು ಗ್ರಾಹಕರಿಗೆ ಅಂತರ ಕಾಯ್ದುಕೊಳ್ಳುವಂತೆ ನೋಡಿ ಕೊಳ್ಳಬೇಕು ಎಂದು ವೈನ್‌ಶಾಪ್ ಮಾಲಕರುಗಳಿಗೆ ಸೂಚನೆ ನೀಡಿದರು. ಅದೇ ರೀತಿ ಕುಂದಾಪುರ, ಬೈಂದೂರು, ಕಾಪು, ಹೆಬ್ರಿ, ಬ್ರಹ್ಮಾವರ, ಪಡುಬಿದ್ರೆ, ಕಾರ್ಕಳಗಳಲ್ಲೂ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಕೆಲವೊಂದು ಅಂಗಡಿಮುಗ್ಗಟ್ಟುಗಳು ತೆರೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News