ಕೊರೋನದಿಂದ ಹಾನಿ ತಪ್ಪಿಸಲು ಹಿರಿಯರನ್ನು ತಾತ್ಕಾಲಿಕವಾಗಿ ಪ್ರತ್ಯೇಕವಾಗಿಡುವುದು ಮಾತ್ರ ದಾರಿ

Update: 2020-03-23 16:14 GMT

ಮಂಗಳೂರು, ಮಾ.23: ಲಾಕ್ ಡೌನ್, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆ ಇತ್ಯಾದಿಗಳಿಂದ ಮಾತ್ರ ಕೊರೋನವೈರಸ್ ಹರಡುವುದನ್ನು ತಡೆಯುವುದು ಅಸಾಧ್ಯ ಎಂದು ಸ್ಪಷ್ಟವಾಗಿ ಹೇಳಿರುವ ಹಿರಿಯ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು, 60 ವರ್ಷ ದಾಟಿದ ಹಿರಿಯರನ್ನು ಮಕ್ಕಳು, ವಯಸ್ಕರಿಂದ  ಪ್ರತ್ಯೇಕವಾಗಿ, ಸುರಕ್ಷಿತವಾಗಿ ಇಡುವುದೊಂದೇ ಈ ಸೋಂಕಿನಿಂದಾಗುವ ಅಪಾಯವನ್ನು ಆದಷ್ಟು ಕಡಿಮೆ ಮಾಡಲು ಉಳಿದಿರುವ ಏಕೈಕ ದಾರಿ ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ. 

ಈ ಬಗ್ಗೆ ಸೋಮವಾರ 'ವಾರ್ತಾ ಭಾರತಿ' ಜೊತೆ ಮಾತನಾಡಿದ ಡಾ. ಕಕ್ಕಿಲ್ಲಾಯ ಹೇಳಿದ್ದು ಹೀಗೆ

"ಎಲ್ಲರೂ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಅದೇನೆಂದರೆ ಕೊರೋನ ವೈರಸ್ ಅನ್ನು ತಕ್ಷಣಕ್ಕೆ ತಡೆಯಲು ಸಾಧ್ಯವಿಲ್ಲ. ಅದು ಈಗಾಗಲೇ ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಖಂಡಿತವಾಗಿ ಇನ್ನಷ್ಟು ಹರಡಲಿದೆ. ಮುಂದಿನ ಮೂರು ತಿಂಗಳು ಈ ವೈರಸ್ ಅನ್ನು ನಾವು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಭಾರೀ ಅಪಾಯ ತಪ್ಪಿಸಲು ನಾವು ಮುಂದಿನ ಮೂರು ದಿನಗಳೊಳಗೆ ಕೆಲವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯವಂತ ಮಕ್ಕಳು, ಯುವಜನತೆ, ಮಧ್ಯವಯಸ್ಕರಿಗೆ ಕೊರೋನ ಸೋಂಕು ತಗಲಿದರೆ ಅದರಿಂದ ಸಾಮಾನ್ಯವಾಗಿ ಯಾವುದೇ ಅಪಾಯವಿಲ್ಲ. ಅದು ಕೇವಲ ಕೆಮ್ಮು, ನೆಗಡಿ, ಜ್ವರ ಇತ್ಯಾದಿಯ ರೂಪದಲ್ಲಿ ಬಂದು ಐದಾರು ದಿನಗಳಗೆ ಯಾವ ಚಿಕಿತ್ಸೆಯೂ ಇಲ್ಲದೆ ತಾನಾಗಿ ಹೋಗುತ್ತದೆ. ಆದರೆ ಸಮಸ್ಯೆ ಇರುವುದು ಆ ಸೋಂಕು 60 ವರ್ಷ ದಾಟಿದ ಹಿರಿಯರಿಗೆ ತಗಲಿದಾಗ. ಅಂತಹ ಹಿರಿಯರಿಗೆ ರಕ್ತದೊತ್ತಡ, ಮಧುಮೇಹ ಅಥವಾ ಹೃದ್ರೋಗದಂತಹ ಯಾವುದಾದರೂ ಸಮಸ್ಯೆ ಮೊದಲೇ ಇದ್ದರೆ ಅಂತಹ ಶೇ 20ರಷ್ಟು ಸೋಂಕಿತರಲ್ಲಿ ಅಪಾಯಕಾರಿ ಸಂಸ್ಯೆಗಳನ್ನುಂಟು ಮಾಡಬಹುದು".

"ಮಕ್ಕಳು, ಯುವಜನರು, ಮಧ್ಯ ವಯಸ್ಕರು ಮತ್ತು ವೃದ್ಧರು ಒಂದೇ ಮನೆಯಲ್ಲಿದ್ದಾಗ ಈ ವೃದ್ಧರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಹೀಗೆ ಒಂದೇ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಹಿರಿವಯಸ್ಕರಿಗೆ ಹರಡಿದರೆ ಭಾರತ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶವೂ ಅಷ್ಟು ದೊಡ್ಡ ಸಂಖ್ಯೆಯ ಜನರಿಗೆ ಒಂದೇ ಬಾರಿಗೆ ಚಿಕಿತ್ಸೆ ನೀಡಲು ಸಾಧ್ಯವೇ ಇಲ್ಲ. ಅಷ್ಟು ಒತ್ತಡ ಎದುರಿಸುವ ವೈದ್ಯಕೀಯ ವ್ಯವಸ್ಥೆ ಎಲ್ಲೂ ಇಲ್ಲ. ಇದೇ ಕಾರಣದಿಂದ ಇಟಲಿಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ಸಾವಿಗೀಡಾಗಿದ್ದಾರೆ. ಆದ್ದರಿಂದ ಈ ಸಂಭಾವ್ಯ ಸನ್ನಿವೇಶವನ್ನು ತಪ್ಪಿಸಲು ಇರುವ ಒಂದೇ ಪರಿಣಾಮಕಾರಿ ಮಾರ್ಗವೆಂದರೆ ಹಿರಿಯರನ್ನು ತಾತ್ಕಾಲಿಕವಾಗಿ ಮನೆಯ ಇತರರಿಂದ ಬೇರ್ಪಡಿಸಿ ಬೇರೆಯೇ ಕಡೆ ಇಡಬೇಕು. ಇದು ಅಸಹಜವಾಗಿ ಕಾಣಬಹುದು, ಇದನ್ನು ಮಾಡುವುದು ಅಷ್ಟು ಸುಲಭವೂ ಅಲ್ಲ. ಆದರೆ ಹೀಗೆ ಮಾಡಲೇಬೇಕು. ಅದಕ್ಕೆ ಜನರು, ಸರಕಾರ, ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಒಂದು ಬಡಾವಣೆಯ ಹಿರಿಯರನ್ನಷ್ಟೇ ಒಂದು ಕಟ್ಟಡದಲ್ಲಿ ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಅಲ್ಲಿನವರು ತಮ್ಮಲ್ಲೇ ಊಟ ತಿಂಡಿ ವ್ಯವಸ್ಥೆ ಮಾಡಿಸಿಕೊಳ್ಳಬೇಕು ಮತ್ತು ಹೊರಗಿನವರು ಯಾರೂ ಭೇಟಿ ನೀಡದಂತೆ ನಿರ್ಬಂಧಿಸಬೇಕು. ಸುಮಾರು ಮೂರು ತಿಂಗಳು ಹೀಗೆ ವ್ಯವಸ್ಥೆ ಮಾಡಿ ಅವರನ್ನು ಸೋಂಕು ತಗುಲದಂತೆ ರಕ್ಷಿಸಿದರೆ, ಸಮುದಾಯದಲ್ಲಿ ಯುವಜನರಿಗೆ ಸೋಂಕು ಹರಡಿ ತನ್ನಿಂತಾನಾಗಿ ಮರೆಯಾದಾಗ ಈ ವಯಸ್ಕರಿಗೆ ಆ ಬಳಿಕ ಸೋಂಕು ತಗಲುವ ಅಪಾಯವು ಇಲ್ಲವಾಗಿ ಅವರೆಲ್ಲರೂ ಸುರಕ್ಷಿತರಾಗಿ ಉಳಿಯುತ್ತಾರೆ".

"ಜನರು ತಮ್ಮ ತಮ್ಮೊಳಗೆ ತಮ್ಮ ಸಂಬಂಧಿಕರನ್ನೇ ಜೊತೆಗೂಡಿಸಿ ಒಂದೇ ಕಟ್ಟಡದಲ್ಲಿ ವಸತಿ-ಊಟಗಳ ವ್ಯವಸ್ಥೆಯನ್ನು ಕೂಡಲೇ ಮಾಡಿಕೊಂಡರೆ ಸರಕಾರದ ಮೇಲೆ ಒತ್ತಡವು ಕಡಿಮೆಯಾಗುತ್ತದೆ. ಬಡವರು ಮತ್ತು ನಿರ್ಗತಿಕರಲ್ಲಿ ಹಿರಿಯ ಜೀವಗಳಿಗೆ ಸರಕಾರವೇ ವ್ಯವಸ್ಥೆಯನ್ನು ಮಾಡಬೇಕು. ಈಗಾಗಲೇ ಇರುವ ವೃದ್ಧಾಶ್ರಯಗಳಲ್ಲಿ ಈ ಕೂಡಲೇ ಯಾರನ್ನೂ ಒಳ-ಹೊರಗೆ ಹೋಗದಂತೆ ನಿರ್ಬಂಧಿಸಿಡಬೇಕು. ಸರಕಾರವೇ ತಾತ್ಕಾಲಿಕವಾಗಿ ವೃದ್ಧಾಶ್ರಯಗಳನ್ನು ತೆರೆಯುವುದಕ್ಕೆ ಲಭ್ಯ ಹಾಸ್ಟೆಲ್ ಗಳು, ಹೋಟೆಲ್ ಗಳು ಇತ್ಯಾದಿ ಕಟ್ಟಡಗಳನ್ನು ಬಳಸಿಕೊಳ್ಳಬಹುದು. ಇದನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ನಮ್ಮ ಹಿರಿಯರನ್ನು ಹೀಗೆ ವೈರಸಿನ ದಾಳಿಯಿಂದ ಮುಂದಿನ 3 ತಿಂಗಳು ಸಂಪೂರ್ಣವಾಗಿ ಸುರಕ್ಷಿತವಾಗಿಟ್ಟರೆ ಕೊರೊನಾದ ಅಪಾಯವನ್ನು ನಿರ್ಮೂಲನೆ ಮಾಡಬಹುದು".

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News