ಉಡುಪಿ ಜಿಲ್ಲೆಯಲ್ಲಿ ಏರುತ್ತಿದೆ ಕೊರೋನ ಶಂಕಿತರ ಸಂಖ್ಯೆ: ಮಂಗಳವಾರ ಮತ್ತೆ 25ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲು

Update: 2020-03-24 14:35 GMT
ಸಾಂದರ್ಭಿಕ ಚಿತ್ರ

ಉಡುಪಿ, ಮಾ. 24: ನೋವೆಲ್ ಕೊರೋನ ವೈರಸ್‌ನ್ನು ನಿಯಂತ್ರಿಸಲು ರಾಜ್ಯ ಸರಕಾರದ ಪ್ರಯತ್ನ ಬಿಗುಗೊಳ್ಳುತ್ತಿರುವಂತೆ ಮಂಗಳವಾರ ಮತ್ತೆ 25 ಮಂದಿ ಹೊಸದಾಗಿ ಶಂಕಿತ ಕೋವಿಡ್-19 ಸೋಂಕಿಗಾಗಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಇವರಲ್ಲಿ 10 ಮಂದಿ ಶಂಕಿತರು ವಿದೇಶಗಳಿಂದ ಮರಳಿದವರಾಗಿದ್ದರೆ, ಇಬ್ಬರು ಕೋವಿಡ್-19 ಸೋಂಕಿತರಾದವರ ಸಂಪರ್ಕ ಹೊಂದಿ, ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ಪರೀಕ್ಷೆಗಾಗಿ ದಾಖಲಾಗಿದ್ದಾರೆ. ಉಳಿದ 13 ಮಂದಿ ತೀವ್ರ ಉಸಿರಾಟದ ತೊಂದರೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಸಂಜೆಯವರೆಗೆ ಒಟ್ಟು 48 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿಗಾಗಿ ಚಿಕಿತ್ಸೆ ಪಡೆಯುತಿದ್ದರೆ, ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಫೆ.29ರಿಂದ ಇಂದಿನವರೆಗೆ ಒಟ್ಟು 76 ಮಂದಿ ಶಂಕಿತರು ನೋವೆಲ್ ಕೊರೋನ ವೈರಸ್ ಸೋಂಕಿಗಾಗಿ ಪರೀಕ್ಷೆಗೊಳಗಾಗಿದ್ದು, ಇವರಲ್ಲಿ 51 ಮಂದಿಯ ವರದಿ ಬಂದಿದ್ದು, ಎಲ್ಲಾ 51 ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಇನ್ನು ಇಂದು ದಾಖಲಾದ 25 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬರಬೇಕಾಗಿದೆ ಎಂದು ಡಾ.ಸೂಡ ತಿಳಿಸಿದರು.

ಇಂದು ಆಸ್ಪತ್ರೆಗೆ ದಾಖಲಾದ 25 ಮಂದಿಯಲ್ಲಿ ಆರು ಮಂದಿ ಕುಂದಾಪುರ ತಾಲೂಕಿನವರಾದರೆ, ಮೂವರು ಕಾರ್ಕಳ ತಾಲೂಕಿನವರು. 12 ಮಂದಿ ಉಡುಪಿ ತಾಲೂಕಿನ ಶಂಕಿತರಿದ್ದು, ಉಳಿದ ನಾಲ್ವರು ಉಡುಪಿ ಜಿಲ್ಲೆಯ ಹೊರಗಿನವರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 904 ಮಂದಿ ಸೋಂಕಿಗಾಗಿ ತೀವ್ರ ನಿಗಾದಲ್ಲಿದ್ದು, ಇವರಲ್ಲಿ 285 ಮಂದಿ ನಿಗದಿತ ಕ್ವಾರಂಟೀನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ಮಾ.21ರ ರಾತ್ರಿಯಿಂದ ಜಿಲ್ಲೆಯ ಶಿರೂರು ಮತ್ತು ಹೆಜ್ಮಾಡಿ ಗಡಿ ಚೆಕ್‌ಪೋಸ್ಟ್‌ನಲ್ಲಿ ಹೊರಗಿನಿಂದ ಬರುವ ಪ್ರಯಾಣಿಕರ ತೀವ್ರ ತಪಾಸಣೆ ಪ್ರಾರಂಭಗೊಂಡಿದ್ದು, ಇದುವರೆಗೆ ಶಿರೂರು ಚೆಕ್‌ಪೋಸ್ಟ್‌ನಲ್ಲಿ 620, ಹೆಜ್ಮಾಡಿ ಚೆಕ್‌ಪೋಸ್ಟ್‌ನಲ್ಲಿ 1586 ಮಂದಿ ಹಾಗೂ ಮಲ್ಪೆ ಬಂದರಿನಲ್ಲಿ 312ಮಂದಿಯ ತಪಾಸಣೆಯನ್ನು ನಡೆಸಲಾಗಿದೆ ಎಂದವರು ಹೇಳಿದರು.

ಕೋವಿಡ್ ಆಸ್ಪತ್ರೆ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಪತ್ತೆಯಾದಲ್ಲಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು ‘ಕೋವಿಡ್ ಆಸ್ಪತ್ರೆ’ಯಾಗಿ ಮಾರ್ಪಾಡು ಮಾಡಲಾಗುವುದು. ಇದರಲ್ಲಿ ಗಂಭೀರ ಹಾಗೂ ಸಮಸ್ಯಾತ್ಮಕ ಕೇಸುಗಳನ್ನು ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಉದ್ಯಾವರ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯನ್ನು ಸರಕಾರಿ ಕ್ವಾರಂಟೇನ್‌ಗೆ ಗುರುತಿಸಲಾಗಿದೆ ಎಂದರು.

ಪ್ರತಿ ಗ್ರಾಪಂಗಳಲ್ಲೂ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ‘ಗ್ರಾಮ ಕಾರ್ಯಪಡೆ’ ಯನ್ನು ರೂಪಿಸಲು ನಿರ್ಧರಿಸಲಾಗಿದೆ. ಅಲ್ಲದೇ ಪ್ರತಿಯೊಬ್ಬ ಶಂಕಿತ ರೋಗಿಯ ಕುಟುಂಬದ ಎಲ್ಲಾ ಸದಸ್ಯರನ್ನು ಗೃಹ ನಿಗಾದಲ್ಲಿ ಇರಿಸಲು ಸಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಎಚ್‌ಓ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News