ಶಿರೂರು: ಟೋಲ್‌ಗೇಟ್ ಬಳಿ ಮುಂದುವರಿದ ತಪಾಸಣೆ

Update: 2020-03-24 14:51 GMT

ಕುಂದಾಪುರ, ಮಾ.24: ಕೊರೋನ ವೈರಸ್ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಕಳೆದ ಕೆಲವು ದಿನಗಳಿಂದ ಶಿರೂರು ಟೋಲ್‌ಗೇಟ್ ಬಳಿ ಆರೋಗ್ಯ ಇಲಾಖೆಯ ವತಿಯಿಂದ ಪ್ರಾರಂಭಿಸಿದ್ದ ಆರೋಗ್ಯ ತಪಾಸಣೆಯನ್ನು ಇಂದೂ ಮುಂದುವರಿಸಲಾಯಿತು.

ಅಲ್ಲದೇ ಬೈಂದೂರು, ಶಿರೂರುಗಳಲ್ಲಿ ಜಿಲ್ಲಾಡಳಿತದ ಆದೇಶವನ್ನು ಸಹ ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ನೋಡಿಕೊಂಡಿ ದ್ದಾರೆ. ಜಿನಸು, ಹಣ್ಣುಹಂಪಲು, ತರಕಾರಿ ಅಂಗಡಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಅಂಗಡಿಗಳು ವ್ಯಾಪಾರ ನಡೆಸದಂತೆ ಅವರು ಎಚ್ಚರವಹಿಸಿದ್ದಾರೆ.

ಅಲ್ಲದೇ ಜಿಲ್ಲೆಯವರನ್ನು ಹೊರತು ಪಡಿಸಿ ಉಳಿದ ಯಾವುದೇ ವಾಹನಗಳು ಜಿಲ್ಲೆಗೆ ಪ್ರವೇಶಿಸದಂತೆ ಅವರು ನೋಡಿಕೊಂಡಿದ್ದಾರೆ. ಮುಂಬೈ ಹಾಗೂ ಇತರ ಕಡೆಗಳಿಂದ ಬರುವ ಪ್ರತಿಯೊಂದು ಕಾರು ಹಾಗೂ ಇತರ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ಅವರ ಸಂಪೂರ್ಣ ಮಾಹಿತಿಗಳನ್ನು ಪಡೆದು ಒಳಗೆ ಪ್ರವೇಶಕ್ಕೆ ಬಿಡುತಿದ್ದಾರೆ.

ಬೈಂದೂರು ತಾಲೂಕಿನಲ್ಲಿ ಬೆಳಗ್ಗೆ ಚಿಕನ್‌ಸ್ಟಾಲ್ ಹಾಗೂ ಇತರ ಕಡೆಗಳಲ್ಲಿ ಜನಸಂದಣಿ ಕಂಡುಬಂದರೂ ಅಪರಾಹ್ನದ ಬಳಿಕ ಇವು ಬಾಗಿಲು ಮುಚ್ಚಿದವು. ಸರಕಾರದ ಲಾಕ್‌ಡೌನ್ ಆದೇಶವನ್ನು ಮೀರಿ ರಸ್ತೆಗಳಲ್ಲಿ ಜಾಲಿರೈಡ್‌ಗೆ ಇಳಿದ ಅನೇಕ ತರುಣರಿಗೆ ಬಿಸಿ ಮುಟ್ಟಿಸಿದರು. ಅನೇಕ ಕಡೆಗಳಲ್ಲಿ ಕ್ರಿಕೆಟ್ ಆಡಲು ಮೈದಾನಕ್ಕಿಳಿದವರನ್ನು ಸಹ ಅವರವರ ಮನೆಗಳಿಗೆ ಅಟ್ಟಿ 31ರವರೆಗೆ ಮನೆಗಳಲ್ಲೇ ಇರುವಂತೆ ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News