ಲಾಕ್‌ಡೌನ್ ಮಧ್ಯೆಯೂ ಉಡುಪಿ ಜಿಲ್ಲೆಯಾದ್ಯಂತ ಜನ, ವಾಹನ ಸಂಚಾರ

Update: 2020-03-24 14:55 GMT

ಉಡುಪಿ, ಮಾ.24: ರಾಜ್ಯ ಸರಕಾರದ ಲಾಕ್‌ಡೌನ್ ಆದೇಶದ ಹಿನ್ನೆಲೆ ಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಇಂದು ಅಂಗಡಿ ಮುಂಗ್ಗಟ್ಟುಗಳು ಹಾಗೂ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೂ ಜನ ಮಾತ್ರ ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದರು.

ಕೆಎಸ್‌ಆರ್‌ಟಿಸಿ, ಖಾಸಗಿ ಸರ್ವಿಸ್ ಹಾಗೂ ಸಿಟಿ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಆಟೋರಿಕ್ಷಾ, ಟ್ಯಾಕ್ಸಿ, ಟೆಂಪೊ ರಸ್ತೆಗೆ ಇಳಿದಿರಲಿಲ್ಲ. ಆದರೆ ಖಾಸಗಿ ಕಾರುಗಳು, ದ್ವಿಚಕ್ರ ವಾಹನಗಳು, ಅಗತ್ಯ ವಸ್ತು ಗಳನ್ನು ಸಾಗಿಸುವ ಲಾರಿ, ಟೆಂಪೊಗಳ ಸಂಚಾರ ಸಾಮಾನ್ಯವಾಗಿ ಕಂಡುಬಂತು.

ಜಿಲ್ಲೆಯಲ್ಲಿ ಅಂಗಡಿಮುಂಗ್ಗಟ್ಟು, ವ್ಯಾಪಾರ ವ್ಯವಹಾರ ಸಂಪೂರ್ಣ ಬಂದ್ ಆಗಿದ್ದರೆ, ಜನರಿಗೆ ತುರ್ತು ಅಗತ್ಯವಾಗಿರುವ ಮೆಡಿಕಲ್, ಮಿಲ್ಕ್ ಪಾರ್ಲರ್, ದಿನಸಿ ಅಂಗಡಿ, ತರಕಾರಿ ಅಂಗಡಿ, ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್ ಗಳು ತೆರೆದ್ದಿದ್ದವು. ಉಡುಪಿ ನಗರಸಭೆ ಕಚೇರಿ ಹಾಗೂ ಕೋರ್ಟ್ ತೆರೆದಿದ್ದೂ ಯಾವುದೇ ಕೆಲಸಗಳು ನಡೆದಿಲ್ಲ.

ಉಡುಪಿ ನಗರಸಭೆಯ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ದಿನಸಿ ಹಾಗೂ ತರಕಾರಿ ಅಂಗಡಿಯವರಿಗೆ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಹಾಗೂ ಜನ ಹೆಚ್ಚು ಸೇರದಂತೆ ನೋಡಿಕೊಳ್ಳುವಂತೆ ಮಾಹಿತಿ ಗಳನ್ನು ನೀಡಲಾಯಿತು. ಅಗತ್ಯವಸ್ತುಗಳ ಬೆಲೆಯನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರಗಿ ಸುವ ಎಚ್ಚರಿಕೆಯನ್ನು ಕೂಡ ನೀಡಲಾಯಿತು.
ಕುಂದಾಪುರ, ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸರು ಅನಗತ್ಯ ವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಎಚ್ಚರಿಕೆ ನೀಡಿದರು.

ಕಾಪು, ಶಿರ್ವದಲ್ಲಿ ತೆರೆದಿದ್ದ ಕೆಲವು ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ಅದೇ ರೀತಿ ಪಡುಬಿದ್ರೆಯಲ್ಲಿ ಪೊಲೀಸರು ತಮ್ಮ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಕರ್ಫ್ಯೂಗೆ ಸಹಕಾರ ನೀಡುವಂತೆ ಕೋರಿದರು. ಜಿಲ್ಲೆಯಾದ್ಯಂತ ಪೊಲೀಸರು ಗಸ್ತು ತಿರುಗಿ ಪರಿಶೀಲನೆ ನಡೆಸಿದರು.
 ಜಿಲ್ಲೆಯ ಗಡಿ ಪ್ರದೇಶವಾಗಿರುವ ಶಿರೂರು ಹಾಗೂ ಹೆಜಮಾಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆಯನ್ನು ನಡೆಸಲಾಯಿತು. ಶಿರೂರು, ಹೊಸಂಗಡಿ ಸೇರಿದಂತೆ ಮೂರು ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ವಾಹನ, ಬೈಕ್ ಸೇರಿದಂತೆ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಲ್ಲಿ ತರಕಾರಿ ಗೂಡ್ಸ್, ಹಾಲಿನ ಗಾಡಿ ಅಲ್ಲದೇ ತುರ್ತು ಸೇವೆಗೆ ಅಗತ್ಯವಾದ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ಸರಕಾರದ ಆದೇಶದಂತೆ ವಿಧಿಸಲಾದ ಕರ್ಫ್ಯೂವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು. ಅನಗತ್ಯವಾಗಿ ಗುಂಪು ಸೇರುವವರಿಗೆ ಎಚ್ಚರಿಕೆ ನೀಡಲಾಗುವುದು. ಅದನ್ನು ಮೀರಿಯೂ ಅನವಶ್ಯಕವಾಗಿ ಓಡಾಟ ಮಾಡಿದರೆ ದಂಡ ಪ್ರಯೋಗ ಮಾಡಬೇಕಾದೀತು.
-ಹರಿರಾಂ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕ, ಕುಂದಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News