ಭಟ್ಕಳ: ಶುಕ್ರವಾರದ ಪ್ರಾರ್ಥನೆ ಸೇರಿದಂತೆ ದಿನದ ನಮಾಝ್ ಮನೆಯಲ್ಲೇ ನಿರ್ವಹಿಸಲು ಜಮಾಅತ್ ನಿರ್ಣಯ

Update: 2020-03-24 15:38 GMT

ಭಟ್ಕಳ: ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡಿರುವ ಇಲ್ಲಿನ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಹಾಗೂ ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರ ಪ್ರಧಾನ ಖಾಝಿಗಳಾದ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ ಹಾಗೂ ಮೌಲಾ ಇಕ್ಬಾಲ್ ಮುಲ್ಲಾ ನದ್ವಿಯವರು ಶುಕ್ರವಾರ ಸೇರಿದಂತೆ ದಿನ ಐದು ಹೊತ್ತಿನ ಪ್ರಾರ್ಥನೆಯನ್ನು ತಮ್ಮ ತಮ್ಮ ಮನೆಯಲ್ಲಿ ನಿರ್ವಹಿಸುವಂತೆ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಜನರು ಮನೆಯಲ್ಲೇ ನಮಾಝ್ ನಿರ್ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ಸಂಜೆ ಭಟ್ಕಳದ ಎರಡೂ ಜಮಾಅತ್ ನ ಮುಖಂಡರು, ತಂಝೀಮ್ ಸಂಸ್ಥೆ ಹಾಗೂ ವಿವಿಧ ವಿದ್ವಾಂಸರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಭಟ್ಕಳದಲ್ಲಿ ಮಂಗಳವಾರ ಎರಡು ಕೊರೋನಾ ಸೋಂಕಿತರು ದೃಡಪಟ್ಟಿರುವ ಹಿನ್ನೆಯಲ್ಲಿ  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಈ ಮಹತ್ತರ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದೂ ಹೇಳಲಾಗುತ್ತಿದೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮರ್ಕಝಿ ಖಲಿಫಾ ಜಮಾತುಲ್ ಮುಸ್ಲಿಮೀನ್ ಖಾಝಿ ಮೌಲಾನ ಕ್ವಾಜಾ ಅಕ್ರಮಿ ಮದನಿ ನದ್ವಿ, ಕೆಲ ಗಂಭೀರ ಪರಿಸ್ಥಿತಿಯಲ್ಲಿ  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮನೆಯಲ್ಲಿ ನಮಾಝ್ ನಿರ್ವಹಿಸಲು ಷರಿಯತ್ ಅನುಮತಿ ನೀಡುತ್ತದೆ. ಯಾರೂ ಕೂಡ ಯಾವುದೇ ಕಾರಣಕ್ಕೂ ಹೊರಗಡೆ ತಿರುಗಾಡದೆ ತಮ್ಮ ತಮ್ಮ ಮನೆಯಲ್ಲಿದ್ದು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News