ಬಂಟ್ವಾಳ: ಜನ ಬೆಂಬಲದೊಂದಿಗೆ ಲಾಕ್ ಡೌನ್ ಯಶಸ್ವಿ

Update: 2020-03-24 15:45 GMT

ಬಂಟ್ವಾಳ, ಮಾ.24: ವಿಶ್ವವನ್ನೇ ಕಾಡಿರುವ ಸಾಂಕ್ರಾಮಿಕ ರೋಗ ಕೋವಿಡ್ - 19 (ಕೊರೋನ) ವೈರಸನ್ನು ನಿಯಂತ್ರಿಸುವ ಸಲುವಾಗಿ ರಾಜ್ಯಾದ್ಯಂತ ಮಾ.31ರ ವರೆಗೆ ವಿಧಿಸಿರುವ ಲಾಕ್ ಡೌನ್‍ಗೆ ಬಂಟ್ವಾಳ ತಾಲೂಕಿನಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಂಗಳವಾರ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ.  

ತಾಲೂಕಿನ ಗ್ರಾಮೀಣ ಪ್ರದೇಶ ಸಹಿತ ನಗರ ಪ್ರದೇಶಗಳಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ ಲಾಕ್ ಡೌನ್‍ಗೆ ಬೆಂಬಲ ಸೂಚಿಸಿದರು. ದಿನಸಿ, ತರಕಾರಿ, ಹಾಲು, ಔಷಧ ಸಹಿತ ಅಗತ್ಯ ವಸ್ತುಗಳ ಖರೀದಿಯ ಅಗತ್ಯ ಇರುವ ಜನರು ಮಾತ್ರ ಪೇಟೆಗೆ ಬಂದು ತಮಗೆ ಬೇಕಾದ ಸಾಮಾನುಗಳನ್ನು ಖರೀದಿಸಿ ಮಧ್ಯಾಹ್ನಕ್ಕೆ ಮೊದಲು ಮನೆ ಸೇರಿದ್ದರು.

ತಾಲೂಕಿನ ಪ್ರಮುಖ ವ್ಯವಹಾರದ ಪ್ರದೇಶಗಳಾದ ಬಿ.ಸಿ.ರೋಡ್, ಕೈಕಂಬ, ಮೆಲ್ಕಾರ್, ಕಲ್ಲಡ್ಕ, ವಿಟ್ಲ, ಮಾಣಿ, ಫರಂಗಿಪೇಟೆ ಮಧ್ಯಾಹ್ನದ ಬಳಿಕ ಸಂಪೂಣ್ ಶಬ್ದವಾಗಿತ್ತು. ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ದಿನಸಿ, ತರಕಾರಿ, ಹಾಲು ಸಹಿತ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿತ್ತು. ಕನಿಷ್ಠ ಸಂಖ್ಯೆಯ ಜನರು ಮಾತ್ರ ಸಾಮಾನು ಖರೀದಿಯಲ್ಲಿ ತೊಡಗಿದ್ದರು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಂಗಡಿ ಮಾಲಕರು ತಮ್ಮ ಅಂಗಡಿಗಳನ್ನು ಮುಚ್ಚಿ ಲಾಕ್ ಡೌನ್‍ಗೆ ಬೆಂಬಲ ಸೂಚಿಸಿದರು. ಆದರೆ ಗ್ರಾಮೀಣ ಪ್ರದೇಶ ಗಳ ಕೆಲವೆಡೆ ಒಳ ರಸ್ತೆಗಳಲ್ಲಿರುವ ಅಂಗಡಿಗಳು ದಿನವಿಡೀ ಬಾಗಿಲು ತೆರೆದಿತ್ತು.

ನಗರ ಪ್ರದೇಶಗಳಲ್ಲಿ ಆಟೋ ರಿಕ್ಷಾಗಳು ಸಂಪೂರ್ಣವಾಗಿ ಸೇವೆ ಸ್ಥಗಿತಗೊಳಿಸಿದ್ದು ಜನರು ತಮ್ಮ ಖಾಸಗಿ ವಾಹನಗಳನ್ನು ಬಳಸಿ ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ್ದರು. ಖಾಸಗಿ ವಾಹನಗಳು ಇಲ್ಲದ ಜನರು ಸ್ವಲ್ಪ ಮಟ್ಟಿಗೆ ಪರದಾಡುವಂತಾಯಿತು.   

ಕರ್ನಾಟಕ ಕೇರಳ ರಾಜ್ಯದ ಗಡಿಯಾದ ಸಾರಡ್ಕ, ಕನ್ಯಾನದ ನೆಲ್ಲಿಕಟ್ಟೆಯಲ್ಲಿ ತಪಾಸನೆಯನ್ನು ಮತ್ತಷ್ಟು ಹೆಚ್ಚಿಸಿರುವ ಪೊಲೀಸರು ಕೇರಳ ದಿಂದ ಆಗಮಿಸುವ ಯಾವುದೇ ವಾಹನಗಳನ್ನು ಕರ್ನಾಟಕ ಪ್ರವೇಶಿಸಲು ಬಿಡುತ್ತಿಲ್ಲ. ಅಲ್ಲದೆ ಇತರ ಒಳ ರಸ್ತೆಗಳಲ್ಲಿ ಕೂಡಾ ರಾಜ್ಯದ ಜನರು ಕೇರಳ ಕಡೆಗೆ ಪ್ರಯಾಣಿಸುವುದು ಕಡಿಮೆ ಮಾಡಿದ್ದಾರೆ.

ಹೊಟೇಲ್‍ಗಳು ಬಂದ್ ಆಗಿರುವುದಿರಿಂದ ಪೌರಕಾರ್ಮಿಕರು, ಪೊಲೀಸರು ಬಿ.ಸಿ.ರೋಡ್ ಇಂದಿರಾ ಕ್ಯಾಂಟೀನ್ ಅನ್ನು ಅವಲಂಭಿಸಿದರು. ಮಧ್ಯಾಹ್ನವೂ ಇಲ್ಲಿ ಊಟದ ವ್ಯವಸ್ಥೆ ಇದ್ದರಿಂದ ಪೌರಕಾರ್ಮಿಕರ ಸಹಿತ ಹಲವರಿಗೆ ಅನುಕೂಲವಾಯಿತು. 

ಬಂಟ್ವಾಳ ತಹಶೀಲ್ದಾರ್ ಸಹಿತ ತಾಲೂಕು ಆಡಳಿತ ಮೈಕ್ರೋಫೋನ್ ಬಳಸಿಕೊಂಡು ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ  ಬೆಳಗ್ಗೆಯಿಂದ ಲಾಕ್ ಡೌನ್‍ನ ಉದ್ದೇಶ, ಕೊರೋನ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೆ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸನೆ ನಡೆಸುತ್ತಿದ್ದರು. ಅನಗತ್ಯವಾಗಿ ಸಂಚಾರಿಸುವ ವಾಹನಗಳನ್ನು ತಡೆಹಿಡಿದು ವಾಪಸ್ ಕಳುಹಿಸುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News