ಲಾಕ್‌ಡೌನ್ ಉಲ್ಲಂಘಿಸಿದರೆ ಒಂದು ವರ್ಷ ಜೈಲು

Update: 2020-03-25 03:47 GMT

ಹೊಸದಿಲ್ಲಿ : ಕೇಂದ್ರ ಸರ್ಕಾರ ದೇಶಾದ್ಯಂತ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದ್ದು, ಇದನ್ನು ಉಲ್ಲಂಘಿಸಿದಲ್ಲಿ ವಿಕೋಪ ನಿರ್ವಹಣೆ ಕಾಯ್ದೆಯ ಸೆಕ್ಷನ್ 51ರ ಅನ್ವಯ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಜೀವಹಾನಿ ಹಾಗೂ ಖಚಿತ ಅಪಾಯ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನಕ್ಕೆ ಬದ್ಧವಾಗಿರಲು ನಿರಾಕರಿಸಿದ ಆರೋಪ ಸಾಬೀತಾದಲ್ಲಿ ಜೈಲು ಶಿಕ್ಷೆಯನ್ನು ಎರಡು ವರ್ಷಗಳ ವರೆಗೂ ವಿಸ್ತರಿಸಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದ ಬಳಿಕ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ವದಂತಿಗಳನ್ನು ಹಬ್ಬಿಸಿದಲ್ಲಿ ಅಂಥ ವ್ಯಕ್ತಿಗಳಿಗೆ ಕೂಡಾ ಒಂದು ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ. ವಿಕೋಪ ಪರಿಹಾರ ಕಾರ್ಯಾಚರಣೆಗೆ ಬಿಡುಗಡೆಯಾದ ಹಣವನ್ನು ದುರುಪಯೋಗಪಡಿಸಿಕೊಂಡಲ್ಲಿ ಅಂಥವರಿಗೆ ಕೂಡಾ ಎರಡು ವರ್ಷದ ವರೆಗೆ ಜೈಲು ಶಿಕ್ಷೆ ಕಾದಿದೆ. ಈ ನಿರ್ದೇಶನಗಳು ಸರ್ಕಾರಿ ಅಧಿಕಾರಿಗಳಿಗೆ ಕೂಡಾ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಮಾರ್ಚ್ 24ರ ಮಧ್ಯರಾತ್ರಿಯಿಂದ ಆರಂಭವಾಗಿರುವ ಲಾಕ್‌ಡೌನ್ ಉಲ್ಲಂಘಿಸುವ ಕಾರ್ಪೊರೇಟ್ ಸಂಸ್ಥೆಗಳಿಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News