ಸೌದಿ ಅರೇಬಿಯಾ- ಅಮೆರಿಕದಿಂದ ವಿಶ್ವದ ಹೊಸ 'ತೈಲಕೂಟ': ವರದಿ

Update: 2020-03-26 09:47 GMT

ವಾಷಿಂಗ್ಟನ್: ಹೊಸ ತೈಲ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಅಮೆರಿಕ ಹಾಗೂ ಸೌದಿ ಅರೇಬಿಯಾ ಮಾತುಕತೆ ನಡೆಸುತ್ತಿವೆ ಎಂದು ಇಂಧನ ಕಾರ್ಯದರ್ಶಿ ಡಾನ್ ಬೌಲೆಟ್ ಅವರನ್ನು ಉಲ್ಲೇಖಿಸಿ 'ಬ್ಲೂಮ್‍ ಬರ್ಗ್' ವರದಿ ಮಾಡಿದೆ.

ಇಂತಹ ಒಪ್ಪಂದ ಉಭಯ ದೇಶಗಳು ಇಡೀ ವಿಶ್ವದ ತೈಲ ಮಾರುಕಟ್ಟೆಯನ್ನು ನಿಯಂತ್ರಿಸುವ ಬಿಗಿ ಕೂಟವನ್ನು ರಚಿಸಲು ಅನುವು ಮಾಡಿಕೊಡಲಿದೆ. ಉಭಯ ದೇಶಗಳು ತಮಗೆ ಅನುಕೂಲಕರ ರೀತಿಯಲ್ಲಿ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲು ಈ ಒಪ್ಪಂದ ದಾರಿ ಮಾಡಿಕೊಡಲಿದೆ.

ಇದು ಒಂದು ಕಲ್ಪನೆ ಮಾತ್ರವಾಗಿದ್ದು, ಟ್ರಂಪ್ ಆಡಳಿತದ ಕೆಲ ಅಧಿಕಾರಿಗಳು ಇದನ್ನು ಬೆಂಬಲಿಸಿದ್ದಾರೆ. ಆದರೆ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇನ್ನೂ ಅಸ್ಪಷ್ಟವಾಗಿದೆ ಎಂದು ಬ್ರೌಲೆಟ್ ಹೇಳಿದ್ದಾರೆ. ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಹಲವು ಚಿಂತನೆಗಳಿದ್ದು, ಅವುಗಳ ಪೈಕಿ ಉಭಯ ದೇಶಗಳ ನಡುವಿನ ಒಪ್ಪಂದವೂ ಒಂದು ಎಂದು ಅವರು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನು ಔಪಚಾರಿಕ ವಿಧಾನದಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಖಾತರಿ ಇಲ್ಲ ಎಂದು ಹೇಳಿದ್ದಾರೆ.

ತೈಲ ಉತ್ಪಾದನೆ ಕಡಿತಕ್ಕೆ ರಷ್ಯಾ ನಿರಾಕರಿಸಿದ ಬೆನ್ನಲ್ಲೇ ಸೌದಿ ಅರೇಬಿಯಾ ಆರಂಭಿಸಿದ ಬೆಲೆ ಸಮರ ಮತ್ತು ಕೊರೋನವೈರಸ್ ಸೋಂಕಿನಿಂದಾಗಿ ಅಮೆರಿಕದ ತೈಲ ಉದ್ಯಮ ಜರ್ಜರಿತವಾಗಿದೆ. ಉತ್ಪಾದಕರು ವೆಚ್ಚ ಯೋಜನೆ ಕಡಿತಗೊಳಿಸುತ್ತಿದ್ದು, ಷೇರುಗಳ ಮರು ಖರೀದಿ ಸ್ಥಗಿತಗೊಳಿಸಿದ್ದಾರೆ. ಅಂತೆಯೇ ಕೆಲ ತೈಲಕ್ಷೇತ್ರ ಸೇವಾ ಕಂಪನಿಗಳು ತಮ್ಮ ಸೇವೆಗಳಿಗೆ ದೊಡ್ಡ ಪ್ರಮಾಣದ ರಿಯಾಯಿತಿ ಕೇಳುತ್ತಿದ್ದಾರೆ. ದೇಶದ ಹಾಗೂ ವಿಶ್ವದ ಆರ್ಥಿಕತೆ ಕ್ಷಿಪ್ರ ಹಾಗೂ ತೀವ್ರವಾಗಿ ತೈಲ ಬೆಲೆ ಮತ್ತಷ್ಟು ಕುಸಿಯುವ ಅಪಾಯ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಉಭಯ ದೇಶಗಳಿಗೂ ಒಳ್ಳೆಯ ಸೂಚನೆಯಲ್ಲ. ಈ ಹಿನ್ನೆಲೆಯಲ್ಲಿ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News