ಖಡ್ಗ ಝಳಪಿಸಿ ಪೊಲೀಸರಿಗೆ ಸವಾಲೊಡ್ಡಿದ್ದ ಸ್ವಯಂಘೋಷಿತ ದೇವ ಮಹಿಳೆ ಬಂಧನ

Update: 2020-03-26 17:19 GMT
Photo: Alok Pandey/Twitter

 ಲಕ್ನೋ, ಮಾ. 26: ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿ ತನ್ನ ಆಶ್ರಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸೂಚಿಸಿದ್ದ ಪೊಲೀಸರಿಗೆ ಸ್ವಯಂಘೋಷಿತ ದೇವಮಹಿಳೆಯೋರ್ವಳು ಖಡ್ಗವನ್ನು ಝಳಪಿಸಿ ಬೆದರಿಕೆಯೊಡ್ಡಿದ ಘಟನೆ ಬುಧವಾರ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ನಡೆದಿದೆ.

‘ಧೈರ್ಯವಿದ್ದರೆ ನನ್ನನ್ನು ಇಲ್ಲಿಂದ ಕಳುಹಿಸಿ’ಎಂದು ಖಡ್ಗವನ್ನು ಝಳಪಿಸುತ್ತ ಈ ಮಹಿಳೆ ಪೊಲೀಸರಿಗೆ ಸವಾಲು ಹಾಕಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಪೊಲೀಸರು ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಿ ಈ ದೇವಮಹಿಳೆ ಮತ್ತು ಆಕೆಯ ಕೆಲವು ಅನುಯಾಯಿಗಳನ್ನು ಬಂಧಿಸುತ್ತಿರುವ ದೃಶ್ಯಗಳೂ ವೀಡಿಯೊದಲ್ಲಿವೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾರ್ಗಸೂಚಿಯನ್ನು ಉಲ್ಲಂಘಿಸಿ ದೇವರಿಯಾದ ಮೆಹ್ದಾ ಪುರ್ವಾ ಪ್ರದೇಶದಲ್ಲಿಯ ಮಹಿಳೆಯ ಮನೆಯಲ್ಲಿ ಸುಮಾರು ನೂರು ಜನರು ಸೇರಿದ್ದರು. ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರು ಮಹಿಳೆಗೆ ಎಚ್ಚರಿಕೆ ನೀಡುತ್ತಿರುವುದೂ ವೀಡಿಯೊದಲ್ಲಿದೆ.

 ಘಟನೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ 13 ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News