'ಸಾರ್ವಜನಿಕರ ನಿರ್ಲಕ್ಷ್ಯವೇ ಕೊರೋನ ಹೆಚ್ಚಾಗಲು ಕಾರಣ'

Update: 2020-03-27 11:40 GMT

ಜಾಗತಿಕ ಮಟ್ಟದಲ್ಲಿ ಸಂಚಲನವನ್ನುಂಟು ಮಾಡಿದ ಕೊರೋನ ವೈರಸ್ ಇದೀಗ ನಮ್ಮ ದೇಶವನ್ನೂ ಹಿಂಡಿ ಹಿಪ್ಪೆ ಮಾಡಲು ಹೊರಟಿದೆ. ಚೀನಾ, ಇಟಲಿಯಂತಹ ಮುಂದುವರಿದ ದೇಶಗಳೇ ಈ ಕೊಲೆಗಾರ ರೋಗದ ಮುಂದೆ ಮಂಡಿಯೂರಿದೆ. ಈ ವೈರಸ್ ದೇಶವ್ಯಾಪಿಯಾದರೆ  ಇಲ್ಲಿನ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಊಹಿಸಲೇ ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಧಾನಮಂತ್ರಿ ಇಡೀ ದೇಶವನ್ನು ಲಾಕ್ ಡೌನ್ ಮಾಡುತ್ತಾ ಪ್ರಜೆಗಳಿಗೆ ಕೈ ಮುಗಿದು "ಯಾರೂ ಮನೆಯಿಂದ ಹೊರಬರಬೇಡಿ" ಎಂದು ವಿನಂತಿಸಿದ್ದರು. ಅದೇ ರೀತಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮಾಧ್ಯಮದವರು ಹೊರಬಾರದಂತೆ ಜನತೆಯಲ್ಲಿ ನಿರಂತರ ಮನವಿ ಮಾಡುತ್ತಲೇ ಇದ್ದಾರೆ. ನಮ್ಮ ಪೊಲೀಸರಂತೂ ಜೀವ ಪಣಕ್ಕಿಟ್ಟು ಜನರಿಗೆ ಈ ರೋಗ ಹರಡದಂತೆ ತಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಆದರೆ  ಜನ ಗುಂಪಾಗಿ ಸೇರಬೇಡಿ ಎಂದು ಪೊಲೀಸರು ಎಚ್ಚರಿಸುವುದು ನಮ್ಮ ಒಳಿತಿಗಾಗಿ ಎಂಬುದನ್ನು ಜನರು ಮರೆತು ಅವರ ಕಣ್ಣು ತಪ್ಪಿಸಿ ಅಥವಾ ಅವರಿಗೆ ಎದುರುತ್ತರ ಕೊಡುತ್ತಾ ಸಂದಣಿ ಹೆಚ್ಚು ಮಾಡುವುದು ಕಂಡು ಬರುತ್ತಿದೆ. ಇದು ಅಕ್ಷಮ್ಯವಾಗಿದೆ. ಆದ್ದರಿಂದ ಸರಕಾರ ಹಾಗೂ ಅಧಿಕಾರಿಗಳು ಸೂಚನೆ ನೀಡುವ ವರೆಗೆ ತಾಳ್ಮೆಯಿಂದ ಮನೆಯಲ್ಲಿ ಉಳಿದರೆ ಕೊರೋನ ಎಂಬ ವೈರಸ್ ಕಾಡ್ಗಿಚ್ಚಿನಂತೆ ಹರಡುವುದನ್ನು ನಾವೇ ತಡೆಯಬಹುದಾಗಿದೆ. ಒಂದು ವೇಳೆ ಇದು ಕೈ ಮೀರಿದರೆ ಅದಕ್ಕೆ ನಮ್ಮ ನಿರ್ಲಕ್ಷ್ಯವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ನಾವು ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಅವರ ಆದೇಶವನ್ನು ಪಾಲಿಸಿ ಮಹಾಮಾರಿಯನ್ನು ಹಿಮ್ಮಟ್ಟಿಸೋಣ. ಚೀನಾದ ದುಸ್ಥಿತಿಯನ್ನು  ಕಂಡೂ ಕೊರೋನವನ್ನು ಗಂಭೀರವಾಗಿ ಪರಿಗಣಿಸದೆ ಆಪಾಯವನ್ನು ತಾನಾಗಿ ತಂದುಕೊಂಡು ದು:ಖಿಸುತ್ತಿರುವ ಇಟಲಿಯ ಶೋಚನೀಯ ಅವಸ್ಥೆ ನಮಗೊಂದು ಪಾಠವಾಗಲಿ.

Writer - ಅಬೂಬಕರ್ ಅನಿಲಕಟ್ಟೆ

contributor

Editor - ಅಬೂಬಕರ್ ಅನಿಲಕಟ್ಟೆ

contributor

Similar News