ಬಂಟ್ವಾಳ ತಾಲೂಕು ಸಂಪೂರ್ಣ ಬಂದ್

Update: 2020-03-28 07:45 GMT

ಬಂಟ್ವಾಳ, ಮಾ.28: ಕೋವಿಡ್ - 19 (ಕೊರೋನ) ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸೂಚನೆಯಂತೆ ಬಂಟ್ವಾಳ ತಾಲೂಕು ಸಂಪೂರ್ಣ ಬಂದ್ ಆಗಿದ್ದು ಕೇವಲ ಒಂದು ಮೆಡಿಕಲ್ ಹೊರತುಪಡಿಸಿ ಬಾಕಿ ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿವೆ.

ಜಿಲ್ಲೆಯ ಬಂಟ್ವಾಳ ತಾಲೂಕು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಶುಕ್ರವಾರ ಎರಡು ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು.

ಬಿ.ಸಿ.ರೋಡಿನಲ್ಲಿರುವ ಗಣೇಶ್ ಮೆಡಿಕಲ್ ಮಾತ್ರ ಬಾಗಿಲು ತೆರೆದಿದ್ದು, ಉಳಿದಂತೆ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ಮೆಡಿಕಲ್ ಅಂಗಡಿಗಳು ಬಾಗಿಲು ಮುಚ್ಚಿವೆ. ಜೊತೆಗೆ ದಿನಬಳಕೆಯ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಾಲಿನ ಅಂಗಡಿಗಳು ಕೂಡಾ ಬಂದ್ ಆಗಿವೆ.

ಸಂಪೂರ್ಣ ಜಿಲ್ಲಾ ಬಂದ್ ಗೆ ಗ್ರಾಮೀಣ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಗ್ರಾಮೀಣ ಭಾಗದಲ್ಲಿರುವ ಸಣ್ಣಪುಟ್ಟ ಅಂಗಡಿಗಳನ್ನು ಕೂಡ ತೆರೆಯದೆ ಸಹಕಾರ ನೀಡಿದ್ದಾರೆ. ಒಂದು ವಾರದ ಲಾಕ್ ಡೌನ್ ನ ಈ ಸಮಯದಲ್ಲಿ ಶನಿವಾರ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಯಾರೂ ಮನೆಯಿಂದ ಹೊರ ಬಂದಿಲ್ಲ ಎಂದು ಹೇಳಲಾಗಿದೆ.

ಹಾಲು, ಪತ್ರಿಕೆ ಬೇಡ ಎಂದಿರುವ ವ್ಯಾಪಾರಿಗಳು: ದಕ್ಷಿಣ ಕನ್ನಡ ಜಿಲ್ಲೆ ಶನಿವಾರ ಸಂಪೂರ್ಣ ಬಂದ್ ಎಂಬ ಸುದ್ದಿ ಶುಕ್ರವಾರ ರಾತ್ರಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಹಾಲು ಮತ್ತು ಪತ್ರಿಕೆ ಮಾರಾಟ ಮಾಡುವ ತಾಲೂಕಿನ ಹೆಚ್ಚಿನ ಏಜೆಂಟ್ ಗಳು ‘’ನಾಳೆ ಹಾಲು ಮತ್ತು ಪತ್ರಿಕೆ ಬೇಡ’’ ಎಂದು ಸರಬರಾಜು ಮಾಡುವ ಸಂಬಂಧಿಸಿದವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಅದರಂತೆ ಇಂದು ತಾಲೂಕಿನ ಬಹುತೇಕ ಕಡೆಗೆ ಹಾಲು ಮಾಡಿ ಪತ್ರಿಕೆ ಸರಬರಾಜು ಆಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News