ಕೊರೋನವನ್ನು ಕೋಮುವಾದಕ್ಕೆ ಬಳಸಿದ 'ವಿಜಯ ಕರ್ನಾಟಕ' ವಿರುದ್ಧ ಸಿಎಂಗೆ ದೂರು, ಕಾನೂನು ಹೋರಾಟ

Update: 2020-03-28 10:23 GMT

ಮಂಗಳೂರು: ಕೊರೋನವೈರಸ್ ಆತಂಕದ ನಡುವೆ ಒಂದು ಸಮುದಾಯವನ್ನು ಹೀಯಾಳಿಸಿ, ಕೊರೋನಾವನ್ನು ಕೋಮುವಾದೀಕರಣ ಮಾಡಲು ಹೊರಟಿರುವ 'ವಿಜಯ ಕರ್ನಾಟಕ' ಪತ್ರಿಕೆ ವಿರುದ್ಧ ಮುಖ್ಯಮಂತ್ರಿ, ಪತ್ರಿಕಾ ಸಂಪಾದಕರು ಮತ್ತು ಪ್ರೆಸ್ ಕೌನ್ಸಿಲ್ ಗೆ ದೂರು ನೀಡಲಾಗುವುದು ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಕಟನೆ ತಿಳಿಸಿದೆ.

ಕೊರೊನಾ ವಿಶ್ವಾದ್ಯಂತ ವ್ಯಾಪಿಸಿದೆ. ಮನುಷ್ಯನ ಧರ್ಮ ನೋಡಿ ಈ ವ್ಯಾಧಿ ಹರಡುತ್ತಿಲ್ಲ. ಧರ್ಮ, ವರ್ಗ, ವರ್ಣದವರಲ್ಲೂ ಈ ರೋಗ ಕಂಡುಬಂದಿದೆ. ವಿಚಿತ್ರವೆಂದರೆ ಕನ್ನಡ ಪತ್ರಿಕೋದ್ಯಮದ ಕೆಲವರ ಕೋಮು ಮನಸ್ಥಿತಿ ಈ ಕೊರೋನವನ್ನು ಕೋಮುವಾದೀಕರಣ ಮಾಡಲು ಹೊರಟಿದೆ. 'ಸತ್ತವರೆಲ್ಲಾ ಒಂದೇ ಸಮುದಾಯದವರು' ಎಂಬ ಮುಖಪುಟ ವರದಿಯನ್ನು ಪತ್ರಿಕೆಯೊಂದು ಪ್ರಕಟಿಸಿದೆ. ಈ ವೈರಸ್ ಕರ್ನಾಟಕದಲ್ಲಿ ಯಾವ ಧರ್ಮದವರಲ್ಲಿ ಹೆಚ್ಚು ಬಂದಿದೆ, ಯಾವ ಧರ್ಮದವರು ಹೆಚ್ಚು ಸತ್ತಿದ್ದಾರೆ, ಯಾವ ಧರ್ಮದವರಿಗೆ ಪೊಲೀಸರು ಹೆಚ್ಚು ಪೆಟ್ಟುಕೊಟ್ಟಿದ್ದಾರೆ ಎನ್ನುವ ಸುದ್ದಿಯೊಂದಿಗೆ ವಿಕೃತ ಮನೋಭಾವ ಪ್ರದರ್ಶಿಸಿದೆ. ಕೊರೋನ ಹರಡಿ ಎಂದು ಕರೆ ನೀಡಿದ್ದ ಕಿಡಿಗೇಡಿಯೊಬ್ಬನ ನೀಚ ಕೃತ್ಯವನ್ನೂ ಈ ವರದಿಯೊಂದಿಗೆ ಜೋಡಿಸಿ ಇತರ ಸಮುದಾಯಗಳ ಮಧ್ಯೆ ಮುಸ್ಲಿಂ ಸಮುದಾಯವನ್ನು ತಪ್ಪಿತಸ್ಥ ವಿಭಾಗವನ್ನಾಗಿ ಚಿತ್ರೀಕರಿಸುವ ಪ್ರಯತ್ನವೂ ನಡೆದಿದೆ. ಕೊರೋನ ವಿರುದ್ಧ ಹೋರಾಟದಲ್ಲಿ ಇಡೀ ಮುಸ್ಲಿಂ ಸಮುದಾಯ ಭಾಗಿಯಾಗಿದ್ದು, ಚರಿತ್ರೆಯಲ್ಲೇ ಮೊದಲ ಬಾರಿ ಮುಸ್ಲಿಮರು ಮಸೀದಿಗಳಲ್ಲಿ ನಮಾಝ್ ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮುಸ್ಲಿಮರು ನಮಾಝ್ ಮಾಡಲು ಮಸೀದಿಗೆ ಹೋಗಬೇಕಾಗಿಲ್ಲ ಎಂಬ ಫತ್ವಾವನ್ನು ಅತ್ಯಂತ ಯಶಸ್ವಿಯಾಗಿ ಸಮುದಾಯದ ಮಧ್ಯೆ ಬಿತ್ತರಿಸಲು ಮುಸ್ಲಿಂ ಪಂಡಿತರಿಗೆ ಸಾಧ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳೂ ಕೂಡ ಮುಸ್ಲಿಮರ ಈ ಹೋರಾಟವನ್ನು ಶ್ಲಾಘಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News