ಕೊರೋನ ವೈರಸ್ ಭೀತಿ: ಉಡುಪಿ ನಗರಾದ್ಯಾಂತ ರಾಸಾಯನಿಕ ಸಿಂಪಡಣೆ

Update: 2020-03-28 10:39 GMT

ಉಡುಪಿ, ಮಾ.28: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸೋಡಿಯಂ ಹೈಪೋ ಕ್ಲೋರೈಟ್ ಸೊಲ್ಯೂಶನ್ ರಾಸಾಯನಿಕ ಸಿಂಪಡಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಗಿದೆ.

ಉಡುಪಿ ಅಗ್ನಿಶಾಮಕ ದಳದ ವಾಹನದ ಮೂಲಕ ಅಗ್ನಿಶಾಮಕ ದಳ ಹಾಗೂ ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ಜಂಟಿಯಾಗಿ ನಗರಸಭೆ ಕಚೇರಿ, ತರಕಾರಿ ಮಾರುಕಟ್ಟೆ, ಕೆಎಸ್ಸಾರ್ಟಿಸಿ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಮೆಡಿಕಲ್ ಶಾಪ್ ಪರಿಸರ, ಕಲ್ಸಂಕ ರಸ್ತೆ, ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಈ ರಾಸಾಯನಿಕ ಸಿಂಪಡಿಸುವ ಕಾರ್ಯ ನಡೆಸಿದರು.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 9000 ಲೀಟರ್ ಸಾಮರ್ಥ್ಯದ ವಾಹನದಲ್ಲಿ ಒಟ್ಟು 18 ಸಾವಿರ ಲೀಟರ್ ರಾಸಾಯನಿಕವನ್ನು ಸಿಂಪಡಿಸಲಾಯಿತು. ಮುಂದೆ ಮಾ.30ರಿಂದ ವಾರ್ಡ್‌ವಾರು ರಾಸಾಯನಿಕ ಸಿಂಪಡಿಸುವ ಕಾರ್ಯ ಮಾಡಲಾಗುವುದು. ಹೀಗೆ ಎಲ್ಲ 35 ವಾರ್ಡ್‌ಗಳಲ್ಲೂ ಈ ಕಾರ್ಯ ನಡೆಸಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಜನಜಂಗುಳಿಯಿಂದ ಕೂಡಿದ್ದ ಪ್ರದೇಶಗಳಲ್ಲಿರುವ ವೈರಸ್ ಹಾಗೂ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುವ ಉದ್ದೇಶದಿಂದ ಸೋಡಿಯಂ ಹೈಪೋಕ್ಲೋರೈಟ್ ಸೊಲ್ಯೂಶನ್ ರಾಸಾಯನಿಕವನ್ನು ಸ್ಪ್ರೇ ಮಾಡಲಾಗಿದೆ. ಈ ಕಾರ್ಯದಲ್ಲಿ ಅಗ್ನಿಶಾಮಕ ದಳದ 15 ಹಾಗೂ ನಗರಸಭೆಯ 25 ಮಂದಿ ತೊಡಗಿಸಿಕೊಂಡಿದ್ದಾರೆ ಎಂದು ನಗರಸಭೆ ಪರಿಸರ ಇಂಜಿನಿಯರ್ ಸ್ನೇಹ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ಎಚ್.ಎಂ., ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಮೋಹನ್‌ರಾಜ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News