ಭಟ್ಕಳ: ಮತ್ತೆ ಮೂವರಲ್ಲಿ ಕೊರೋನ ದೃಢ: ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆ

Update: 2020-03-28 10:42 GMT

ಭಟ್ಕಳ, ಮಾ.28: ಶನಿವಾರ ಭಟ್ಕಳದಲ್ಲಿ ಮೂರು ಹೊಸ ಕೊರೋನ ಸೋಂಕು ಪ್ರಕರಣ ದೃಢಪಟ್ಟಿದ್ದಾಗಿ ವರದಿಯಾಗಿದ್ದು ಇದರೊಂದಿಗೆ ಈ ಸೋಂಕು ಬಾಧಿತರ ಒಟ್ಟು ಸಂಖ್ಯೆ ಆರಕ್ಕೇರಿದಂತಾಗಿದೆ. ಮಂಗಳೂರಿನಲ್ಲಿ ಭಟ್ಕಳ ಮೂಲದ ವ್ಯಕ್ತಿಯು ಕೊರೋನ ಪೀಡಿತನಾಗಿ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಏಳು ಮಂದಿಗೆ ಸೋಂಕು ದೃಢಪಟ್ಟಂತಾಗಿದೆ.

ದುಬೈನಿಂದ ಬಂದಿದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಈ ವ್ಯಕ್ತಿಯ ಕುಟುಂಬದವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.

ಈತನ 55 ವರ್ಷದ ಪತ್ನಿ , 22 ಹಾಗೂ 28 ವರ್ಷದ ಪುತ್ರಿಯರಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಈಗ ಭಟ್ಕಳ ಮೂಲದ ಏಳು (6+1) ಜನರಲ್ಲಿ ಸೋಂಕು ಇರುವುದು ದೃಢಪಟ್ಟಂತಾಗಿದೆ. ಸೋಂಕಿತ ಎಲ್ಲರನ್ನೂ ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ದೃಢಪಟ್ಟವರು…

1). ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾ.19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5:45ಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ ಲಕ್ಷಣಗಳನ್ನು ಕಾಣಿಸಿಕೊಂಡಿದ್ದು, ನೇರವಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲೇ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

2). 40 ವರ್ಷದ ಭಟ್ಕಳ ಮೂಲದ ವ್ಯಕ್ತಿ ದುಬೈನಿಂದ ವಿಮಾನದಲ್ಲಿ ಬಂದು 21ಕ್ಕೆ ಮಂಗಳೂರಿನಲ್ಲಿ ಬೆಳಗ್ಗೆ 6.30ಕ್ಕೆ ಬಂದಿಳಿದಿದ್ದರು. ಅವರ ಸಂಬಂಧಿಕರೊಬ್ಬರ ಕಾರಿನಲ್ಲಿ ಭಟ್ಕಳಕ್ಕೆ ಬಂದಿದ್ದ ಅವರು, ಮಧ್ಯಾಹ್ನ ತಾವೇ ಸ್ವಯಂಪ್ರೇರಿತವಾಗಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಲಕ್ಷಣ ಕಂಡುಬಂದಿದ್ದರಿಂದ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾ.23ರಂದು ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು.

3).  ಇನ್ನೊಬ್ಬರು 65 ವರ್ಷದ ಭಟ್ಕಳ ಮೂಲದವರಾಗಿದ್ದು, ಇವರು ದುಬೈನಿಂದ 19ಕ್ಕೆ ಮುಂಬೈಗೆ ಬಂದು ಇಳಿದಿದ್ದರು. ಅಲ್ಲಿಂದ ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಟ್ಕಳಕ್ಕೆ 20ಕ್ಕೆ ಬಂದು ಇಳಿದಿದ್ದರು. ರೈಲು ನಿಲ್ದಾಣದಿಂದ ಆಟೊ ರಿಕ್ಷಾದಲ್ಲಿ ಮಗನ ಜೊತೆಗೆ ಮನೆಗೆ ತೆರಳಿದ್ದರು‌. 21ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದ್ದರು. ಆದರೆ, ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಎರಡು ದಿನದ ಬಳಿಕ ಜ್ವರ ಸೇರಿದಂತೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಗಂಟಲಿನ ದ್ರವವನ್ನೂ ಬೆಂಗಳೂರಿಗೆ ಕಳುಹಿಸಲಾಗಿತ್ತು. ಮಾ.23ರಂದು ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು.

4) ದುಬೈನಿಂದ 20ರಂದು ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಲಿಳಿದಿದ್ದ 22 ವರ್ಷದ ಯುವಕ, ಕಾರವಾರದ ಹೋಟೆಲ್ ವೊಂದರಲ್ಲಿ ಉಪಹಾರ ಸೇವಿಸಿ ಸಹೋದರನ ಜೊತೆಯಲ್ಲಿ ಭಟ್ಕಳಕ್ಕೆ ತೆರಳಿದ್ದ. ಈತನಲ್ಲೂ ಸೋಂಕು ಇರುವುದು ದೃಢಪಟ್ಟಿದೆ.

ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಈಗಾಗಲೇ ತರಕಾರಿ, ಹಣ್ಣು, ಕಿರಾಣಿ ವಸ್ತುಗಳನ್ನು ಮನೆಯ ಬಾಗಿಲಿಗೇ ಒದಗಿಸುವ ಸೇವೆಯನ್ನ ಪ್ರಾರಂಭಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಹಾಗೂ ಗ್ರಾಮೀಣ ಭಾಗದಲ್ಲಿ ಮೂರು ದಿನಕ್ಕೊಮ್ಮೆ ಅಗತ್ಯ ವಸ್ತುಗಳನ್ನ ಪೂರೈಸಲಾಗುತ್ತಿದೆ.

ಆದರೂ ಸಹ ಜನರು ವಿನಾಕಾರಣ ತಿರುಗಾಟ ನಡೆಸುತ್ತಿದ್ದು ಸೋಂಕು ನಿಯಂತ್ರಣಕ್ಕೆ ಅಡ್ಡಿ ಎನ್ನುವಂತಾಗಿದೆ. ಮುಖ್ಯ ರಸ್ತೆಗಳನ್ನ ಹೊರತುಪಡಿಸಿ ನಗರದ ಹೊರ ವಲಯದಲ್ಲಿಯೇ ಹೆಚ್ಚಿನದಾಗಿ ಜನರು ಓಡಾಟ ನಡೆಸುತ್ತಿದ್ದು ಪೊಲೀಸರು ಕಂಡುಬಂದಲ್ಲಿ ಬೈಕ್ ವಾಪಸ್ ತಿರುಗಿಸಿಕೊಂಡು ಹೋಗುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News