ವಿಜಯ ಕರ್ನಾಟಕದಿಂದ ವಿಕೃತ ಬರಹ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡನೆ

Update: 2020-03-28 12:33 GMT

ಉಡುಪಿ: ಕೊರೋನ ಸೋಂಕು ಪ್ರಕರಣಗಳಿಗೆ ಒಂದು ಸಮುದಾಯದ ಸಂಬಂಧ ಕಲ್ಪಿಸುವ ರೀತಿಯಲ್ಲಿ ಮಾ. 28ರಂದು ಮುಖಪುಟ ಬರಹ ಪ್ರಕಟಿಸಿರುವ ವಿಜಯ ಕರ್ನಾಟಕ ದಿನಪತ್ರಿಕೆಯ ಧೋರಣೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಮತ್ತು ಪತ್ರಿಕೆ ಕ್ಷಮೆಯಾಚಿಸಬೇಕು ಎಂದು ಒಕ್ಕೂಟದ ಪತ್ರಿಕಾ ವಕ್ತಾರ ಸಲಾಹುದ್ದೀನ್ ಅಬ್ದುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಡೀ ವಿಶ್ವವೇ ಇಂದು ಕೊರೋನ ಸೋಂಕಿನ ಮಹಾಮಾರಿಯಿಂದ ತಲ್ಲಣಗೊಂಡಿದೆ. ನಮ್ಮ ಸರಕಾರಗಳು, ವೈದ್ಯಕೀಯ ವ್ಯವಸ್ಥೆ ಇದನ್ನು ನಿಯಂತ್ರಿಸಲು ಎಲ್ಲ ರೀತಿಯಿಂದ ಶ್ರಮಿಸುತ್ತಿವೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಜಾತಿಮತವೆಂದು ಭೇದ ಮಾಡದೆ ತಮ್ಮ ಪ್ರಾಣ ಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾದ ಪ್ರಮುಖ ದಿನಪತ್ರಿಕೆಯೊಂದು ಇಂತಹದೊಂದು ಅತ್ಯಂತ ಬೇಜವಾಬ್ದಾರಿಯುತ, ಪಕ್ಷಪಾತಿ, ನಿರಾಧಾರ ಹಾಗು ತೀವ್ರ ಪೂರ್ವಗ್ರಹ ಪೀಡಿತ ಬರಹ ಪ್ರಕಟಿಸಿರುವುದು ಪತ್ರಿಕಾಧರ್ಮಕ್ಕೆ ಹಾಗು ಸಮಾಜಕ್ಕೆ ಬಗೆದ ದ್ರೋಹವಾಗಿದೆ. ಕರ್ನಾಟಕದಲ್ಲಿ ಕೊರೋನ ಸೋಂಕು ಹರಡುತ್ತಿರುವುದೇ ಮುಸ್ಲಿಮರಿಂದ ಎಂದು ವಿಜಯ ಕರ್ನಾಟಕ ಬರೆದಿದೆ. ಕೊರೋನ ಕುರಿತ ಅಧಿಕೃತ ಸರಕಾರಿ ಅಂಕಿ ಅಂಶಗಳನ್ನು, ಮಾಹಿತಿಗಳನ್ನು ಪರಿಶೀಲಿಸಿದರೆ ಇದು ಶುದ್ಧ ಸುಳ್ಳು ವರದಿ ಎಂದು ಸಾಬೀತಾಗುತ್ತದೆ. ಜೊತೆಗೆ ಇಂತಹದೊಂದು ಮಾರಕ ಸೋಂಕಿಗೆ ಬಲಿಯಾದವರ ಧರ್ಮ, ಜಾತಿ ಉಲ್ಲೇಖಿಸಿ ವರದಿ ಪ್ರಕಟಿಸುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲ ಸಮಾಜ ವಿರೋಧಿ ಕೃತ್ಯವಾಗಿದೆ.

ರಾಜ್ಯಾದ್ಯಂತ ಎಲ್ಲ ಹಿರಿಯ ಮುಸ್ಲಿಂ ವಿದ್ವಾಂಸರು, ಖಾಝಿಗಳು ಹಾಗು ಸಂಘಟನೆಗಳು ಸರಕಾರದ ಆದೇಶದ ಪ್ರಕಾರ ಮತ್ತು ಕೆಲವೆಡೆ ಸರಕಾರ ಹೇಳುವ ಮೊದಲೇ ಕೊರೋನ ನಿಯಂತ್ರಣಕ್ಕಾಗಿ ಮುಸ್ಲಿಮರ ಪಾಲಿಗೆ  ಅತ್ಯಂತ ಮುಖ್ಯವಾದ ಶುಕ್ರವಾರದ ಜುಮಾ ನಮಾಝ್ ಸಹಿತ ಎಲ್ಲ ಸಾಮೂಹಿಕ ನಮಾಝ್ ಗಳನ್ನು ನಿಲ್ಲಿಸಲು ಸ್ಪಷ್ಟ ಸೂಚನೆ ನೀಡಿರುವುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ರಾಜ್ಯದೆಲ್ಲೆಡೆ ಈ ಸೂಚನೆಯನ್ನು ಬಹುತೇಕ ಎಲ್ಲ ಮಸೀದಿಗಳು ಹಾಗು ಮುಸ್ಲಿಮರು ಪಾಲಿಸುತ್ತಿದ್ದಾರೆ. ಮುಖ್ಯಮಂತ್ರಿಗಳೂ ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿ ಮುಸ್ಲಿಮರ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಕೊರೋನ ಸೋಂಕು ನಿಯಂತ್ರಣದ ವಿಷಯದಲ್ಲಿ ಸರಕಾರದ ಆದೇಶವನ್ನು ಯಾರು ಉಲ್ಲಂಘಿಸಿದರೂ ಅದು ಅತ್ಯಂತ ಖಂಡನೀಯ. ಆದರೆ ಕೆಲವು ಬೆರಳೆಣಿಕೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಸಮುದಾಯವೇ ಸೋಂಕು ಹರಡುತ್ತಿದೆ ಎಂದು ಬರಹ ಪ್ರಕಟಿಸಿ ಆ ಮೂಲಕ ಸಮಾಜದಲ್ಲಿ ಒಂದು ಸಮುದಾಯದ ವಿರುದ್ಧ ವ್ಯಾಪಕವಾಗಿ ದ್ವೇಷ ಹರಡುವ ವಿಜಯ ಕರ್ನಾಟಕ ಪತ್ರಿಕೆಯ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಪತ್ರಿಕೆ ಈ ಬಗ್ಗೆ ರವಿವಾರದ ಸಂಚಿಕೆಯ ಮುಖಪುಟದಲ್ಲೇ  ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಪತ್ರಿಕೆಯ ವಿರುದ್ಧ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತದೆ ಎಂದು ಸಲಾಹುದ್ದೀನ್ ಅಬ್ದುಲ್ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News