ಪಾಸ್‌ಪೋರ್ಟ್ ಮುಟ್ಟುಗೋಲು: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Update: 2020-03-28 14:34 GMT

ಉಡುಪಿ, ಮಾ.28: ಕೊರೋನ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಗೆ ವಿದೇಶದಿಂದ ಬಂದಿರುವವರಿಗೆ ವಿಧಿಸಲಾಗಿರುವ ಹೋಮ್ ಕ್ವಾರಂಟೀನ್ ನಿರ್ಬಂಧವನ್ನು ಉಲ್ಲಂಘಿಸುವವರಿಗೆ ಕಟುವಾದ ಎಚ್ಚರಿಕೆಯನ್ನು ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಅಂತಹವರ ಪಾರ್ಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿ ಮುಂದಿನ ವಿದೇಶ ಪ್ರಯಾಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(3)ರಂತೆ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ವಿದೇಶಗಳಿಂದ ಹಾಗೂ ಹೊರರಾಜ್ಯಗಳಿಂದ ಬಂದಿರುವ ಹಾಗೂ ಜಿಲ್ಲೆಯಲ್ಲಿ ಸೋಂಕು ತಗಲಿರುವ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಚಿಕಿತ್ಸೆ ಗಾಗಿ ಮನೆಯಲ್ಲೇ ನಿರ್ಬಂಧದಲ್ಲಿ ಇರುವಂತೆ ತಿಳಿಸಲಾಗಿದೆ.

ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಕನಿಷ್ಠ ಮೂರು ಬಾರಿ ಅಂಥವರ ಮನೆಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಆದೇಶಗಳನ್ನು ಪಾಲಿಸದೇ ಇರುವ ಹೋಮ್ ಕ್ವಾರಂಟೀನ್ ನಲ್ಲಿರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವ ಅಧಿಕಾರವನ್ನು ಈಗಾಗಲೇ ಪ್ರತ್ಯಾಯೋಜಿಸಲಾಗಿದೆ.

ಆದರೂ ಹೋಮ್ ಕ್ವಾರಂಟೀನ್‌ನಲ್ಲಿ ಇರಬೇಕಾದ ಸಾಕಷ್ಟು ಮಂದಿ ನಿಯಮಗಳನ್ನು ಪಾಲಿಸದೇ ಹೊರಗೆ ತಿರುಗುತ್ತಿರುವ ಬಗ್ಗೆ ವರದಿಗಳು, ದೂರುಗಳು ಬರುತ್ತಿವೆ. ಇಂಥ ವ್ಯಕ್ತಿಗಳು ನಿರ್ದೇಶನಗಳನ್ನು ಪಾಲಿಸಿ ಕಡ್ಡಾಯ ವಾಗಿ ಪಾಲಿಸಿ ತಮ್ಮ ಮನೆಗಳಲ್ಲಿ ಇರುವಂತೆ ಎಚ್ಚರಿಕೆ ನೀಡುತ್ತಾ, ಆದೇಶವನ್ನು ಉಲ್ಲಂಘಿಸಿ ಯಾರಾದರೂ ಹೊರಗೆ ಬಂದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಲ್ಲದೇ, ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News