ಕೊರೋನ ವೈರಸ್: ಉಡುಪಿಯಲ್ಲಿ ಮತ್ತಿಬ್ಬರ ಗಂಟಲಿನ ದ್ರವ ಪರೀಕ್ಷೆಗೆ

Update: 2020-03-28 14:39 GMT

ಉಡುಪಿ, ಮಾ.28: ಜಿಲ್ಲೆಯಲ್ಲಿಂದು ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಒಟ್ಟು ಏಳು ಮಂದಿವಿವಿಧ ಆಸ್ಪತ್ರೆಗಳಿಗೆ ದಾಖಲಾದರೂ, ರಾಜ್ಯ ಸರಕಾರದ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ ಕೇವಲ ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಸೋಂಕಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಶಂಕಿತ ರೋಗಿಯ ಮಾದರಿಗಳ ಪರೀಕ್ಷೆಗೆ ರಾಜ್ಯದ ಪೂರ್ವಾನುಮತಿಯನ್ನು ಪಡೆಯಬೇಕಾಗಿರುವುದರಿಂದ ಇಂದು ಇಬ್ಬರ ಮಾದರಿಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಆದುದರಿಂದ ಪರೀಕ್ಷೆಗಾಗಿ ಏಳು ಮಂದಿ ಆಸ್ಪತ್ರೆಗೆ ದಾಖಲಾದರೂ ಇಬ್ಬರ ಮಾದರಿಗಳನ್ನು ಮಾತ್ರ ಪಡೆಯಲಾಗಿದೆ ಎಂದವರು ತಿಳಿಸಿದರು.

ಶುಕ್ರವಾರ ಪರೀಕ್ಷೆಗೆ ಕಳುಹಿಸಿದ 21 ಮಂದಿಯ ಮಾದರಿಯ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ. ಆದುದರಿಂದ ಇಂದಿನ ಎರಡು ಸೇರಿ ಒಟ್ಟು 23 ಮಂದಿಯ ಪರೀಕ್ಷಾ ವರದಿ ಬರಬೇಕಾಗಿದೆ. ಇದುವರೆಗೆ ಒಟ್ಟು 126 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರಲ್ಲಿ 103 ಮಂದಿ ವರದಿ ಮಾತ್ರ ಬಂದಿದೆ. ಇವರಲ್ಲಿ 102 ಮಂದಿಯ ವರದಿ ನೆಗೆಟೀವ್ ಆಗಿ ಬಂದರೆ, ಒಬ್ಬನ ವರದಿ ಮಾತ್ರ ಪಾಸಿಟೀವ್ ಆಗಿದೆ ಎಂದು ಡಾ.ಸೂಡ ವಿವರಿಸಿದರು.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 1865 ಮಂದಿ ತಪಾಸಣೆಗೊಳಗಾಗಿದ್ದು, ಇವರಲ್ಲಿ ಇಂದು 429 ಮಂದಿಯನ್ನು ಹೋಮ್ ಕ್ವಾರಂಟೇನ್‌ನಲ್ಲಿ ಡಲಾಗಿದೆ. 663 ಮಂದಿ 14 ದಿನಗಳ ಹೋಮ್ ಕ್ವಾರಂಟೇನ್‌ನ್ನು ಪೂರ್ಣಗೊಳಿಸಿದ್ದರೆ, 73 ಮಂದಿ 28 ದಿನಗಳ ಕ್ವಾರಂಟೇನ್‌ನ್ನು ಪೂರ್ಣಗೊಳಿಸಿದ್ದಾರೆ.

99,638 ಮನೆಗಳಿಗೆ ಭೇಟಿ: ನೋವೆಲ್ ಕೊರೋನ ವೈರಸ್ ಕುರಿತು ಮನೆ ಮನೆಗೆ ತೆರಳಿ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದುವರೆಗೆ ಜಿಲ್ಲೆಯಲ್ಲಿ 99,638 ಮನೆ ಗಳಿಗೆ ಭೇಟಿ ನೀಡಿದ್ದು, 4,43,632 ಮಂದಿಯನ್ನು ಸಂಪರ್ಕಿಸಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಅಲ್ಲದೇ ವಿದೇಶಗಳಿಂದ ಬಂದು ಮನೆಗಳಲ್ಲಿ ನಿರ್ಬಂಧದಲ್ಲಿರುವವರನ್ನೂ ಭೇಟಿ ಮಾಡಿ ಅವರಿಗೂ ನಿರ್ಧಿಷ್ಟ ಸಮಯದವರೆಗೆ ಮನೆಯಲ್ಲೇ ಉಳಿಯುವಂತೆ ನೋಡಿಕೊಳ್ಳುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News