ಮಾ.29ರಿಂದ ಉಡುಪಿಯಲ್ಲಿ ಬೆಳಗ್ಗೆ 7ರಿಂದ 11ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

Update: 2020-03-28 16:11 GMT

ಉಡುಪಿ, ಮಾ. 28: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(3)ರಂತೆ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದ್ದು, ಇದರಂತೆ ಜನರು ಮನೆ ಬಿಟ್ಟು ಹೊರಗೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.

ಆದರೆ ಜನರಿಗೆ ದೈನಂದಿನ ಉಪಯೋಗದ ದಿನಸಿ, ತರಕಾರಿ, ಹಾಲು, ಹಣ್ಣು ಹಂಪಲು, ಮಾಂಸ, ಮೀನು ಮುಂತಾದ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆದು ಸಾಮಾಜಿಕ ಅಂತರವನ್ನು (ಸೋಷಿಯಲ್ ಡಿಸ್ಟೆನ್ಸ್) ಪಾಲಿಸಿ ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ.
ಈ ಮಧ್ಯೆ ಭಟ್ಕಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕಾಯಿಲೆಯ ಸೋಂಕು ಹೊಂದಿರುವ ಪ್ರಕರಣಗಳು ಹೆಚ್ಚುತಿದ್ದು, ಈ ಹಿನ್ನೆಲೆ ಯಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಅಗತ್ಯ ವಸ್ತುಗಳ ಸೇವೆಯನ್ನು ನಿಯಮಿತಗೊಳಿಸುವ ಅವಶ್ಯಕತೆ ಇದೆ. ಅಲ್ಲದೇ ಈಗಾಗಲೇ ಕಾರ್ಕಳದಲ್ಲಿ ಬೆಳಗ್ಗೆ 7 ರಿಂದ 11 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ಈ ವ್ಯವಸ್ಥೆ ಫಲಪ್ರದವಾಗಿದೆ.

ಆದುದರಿಂದ ಸಾರ್ವಜನಿಕರು ತಮಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳು, ಔಷಧಿಗಳು ಮತ್ತಿತರ ಅವಶ್ಯಕ ಸಾಮಗ್ರಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಖರೀದಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬೆಳಗ್ಗೆ 7 ರಿಂದ 11 ರವರೆಗೆ ಸಮಯ ನಿಗದಿಗೊಳಿಸಿದ್ದು, ಅವಶ್ಯಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಈ ಸಮಯದಲ್ಲಿ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗುವುದು.

ಸಾರ್ವಜನಿಕರು ರವಿವಾರ (ಮಾ. 29)ರಿಂದ ತಮಗೆ ಅಗತ್ಯವಿರುವ ದಿನಸಿ, ತರಕಾರಿ, ಹಾಲು, ಹಣ್ಣುಹಂಪಲು, ಮಾಂಸ, ಮೀನು ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಈ ಅವಧಿಯಲ್ಲಿ ಮಾತ್ರ ಖರೀದಿಸಬೇಕಾಗುತ್ತದೆ. ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ನಿಗದಿತ ಅವಧಿಯ ನಂತರ ಈ ಅಂಗಡಿಗಳನ್ನು ಮುಚ್ಚಲಾಗುತ್ತದೆ.

ಈ ನಿರ್ಬಂಧ ಮೆಡಿಕಲ್ ಶಾಪ್‌ಗಳಿಗೆ ಅನ್ವಯಿಸುವುದಿಲ್ಲ. ರಸ್ತೆಗಳಲ್ಲಿ ಅನಗತ್ಯವಾಗಿ ಜನರು ಸಂಚರಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News