ಮಾ.29-30: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹೈನುಗಾರರಿಂದ ಹಾಲು ಖರೀದಿ ಇಲ್ಲ: ಒಕ್ಕೂಟ

Update: 2020-03-28 15:20 GMT

ಉಡುಪಿ, ಮಾ.28: ಕೋವಿಡ್-19ರ ಕಾರಣದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲ್ಲೆ ಕಳೆದ ಹಲವು ದಿನಗಳಿಂದ ಸಂಪೂರ್ಣ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಒಕ್ಕೂಟದ ಡೀಲರುಗಳ ಹಾಲು ಮಾರಾಟಕ್ಕೆ ತೊಂದರೆಯಾಗಿದ್ದು, ಇಂದಿನಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಮಾ.22ರಿಂದ ಅವಭಿಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ಫ್ಯೂ ಇರುವುದರಿಂದ ಪ್ರತಿನಿತ್ಯ ಒಂದು ಲಕ್ಷ ಲೀ. ಹಾಲಿನ ಮಾರಾಟ ಕಡಿಮೆಯಾಗಿದೆ. ಹಾಲನ್ನು ಪರಿವರ್ತನಾ ಘಟಕಗಳಿಗೆ ಕಳುಹಿಸಿದ್ದು, ಅಲ್ಲಿಯೂ ಸಹ ಸಾಮರ್ಥ್ಯ ಮೀರಿ ಹಾಲಿನ ದಾಸ್ತಾನು ಇರುವುದರಿಂದ ತಕ್ಷಣ ಪರಿವರ್ತನೆಯೂ ಸಾಧ್ಯವಾಗುತ್ತಿಲ್ಲ. ಇದರಿಂದ ಒಕ್ಕೂಟದ ಸಂಘಗಳಿಂದ ಹಾಲನ್ನು ಸಂಗ್ರಹಿಸಿ ದಾಸ್ತಾನು ಮಾಡಲು ಅಸಾಧ್ಯವಾಗುತ್ತಿದೆ ಒಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಆದುದರಿಂದ ಈಗಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಅನಿವಾರ್ಯವಾಗಿ ಮಾ.29 ಮತ್ತು 30ರಂದು ಎರಡೂ ಸರದಿಗಳಲ್ಲಿ (ಬೆಳಗ್ಗೆ ಮತ್ತು ಸಂಜೆ) ಹಾಲು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಪ್ರತಿದಿನದಂತೆ ಮುಂದುವರಿಯಲಿದೆ.

ಮಾ.31ರ ಮಂಗಳವಾರದ ಬೆಳಗಿನ ಸರದಿಯಿಂದ ಗುಣಮಟ್ಟದ ಹಾಲು ಸಂಗ್ರಹಣೆ ಪುನರಾರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಒಕ್ಕೂಟದ ಪರಿಸ್ಥಿತಿಯನ್ನು ವಿವರಿಸಲಾಗಿದ್ದು, ಅವರು ಮಾ.29ರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಿಗದಿತ ಸಮಯದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯ ಹೈನುಗಾರರು ಪರಿಸ್ಥಿತಿಯನ್ನು ಅರಿತು ಒಕ್ಕೂಟದೊಂದಿಗೆ ಸಹಕರಿಸುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News