ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂಧ: ಶಿರೂರು ಗಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರು

Update: 2020-03-28 15:27 GMT

ಕುಂದಾಪುರ, ಮಾ.28: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿರುವ ಪರಿಣಾಮ ಉಡುಪಿ ಜಿಲ್ಲೆಯ ಗಡಿ ಭಾಗವಾಗಿರುವ ಶಿರೂರು ಚೆಕ್‌ಪೋಸ್ಟ್ ಬಳಿ ಉಡುಪಿ ಜಿಲ್ಲೆಯಲ್ಲಿ ದುಡಿಯು ತ್ತಿರುವ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಹಾರದ ಸಮಸ್ಯೆ ಹಾಗೂ ರೋಗ ಭೀತಿಯಿಂದ ವಾಹನಗಳಲ್ಲಿ ತಮ್ಮ ತಮ್ಮ ಊರಿಗೆ ಹೊರಟಿದ್ದ ಬಿಜಾಪುರ, ಕೊಪ್ಪಳ, ಬಾಗಲಕೋಟೆ, ಗುಲ್ಬರ್ಗಾ ಜಿಲ್ಲೆಯ ವಲಸೆ ಕಾರ್ಮಿಕರು ಶನಿವಾರ ನಸುಕಿನ ವೇಳೆ ಎರಡು ಗಂಟೆ ಸುಮಾರಿಗೆ ಮುಂದಕ್ಕೆ ಹೋಗಲು ಸಾಧ್ಯವಾಗದೆ ಶಿರೂರು ಚೆಕ್ ಪೋಸ್ಟ್ ಬಳಿ ಜಮಾಯಿಸಿದ್ದರು.

ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ., ಸಹಾಯಕ ಪೊಲೀಸ್ ಅಧೀಕ್ಷಕಿ ಹರಿರಾಮ್ ಶಂಕರ್ ಹಾಗೂ ಬೈಂದೂರು ಎಸ್ಸೈ ಸಂಗೀತಾ, ಇವರನ್ನು ಮುಂದಕ್ಕೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಇದಕ್ಕೆ ಉತ್ತರಕನ್ನಡ ಜಿಲ್ಲಾಡಳಿತ ಒಪ್ಪದ ಕಾರಣ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ವಲಸೆ ಕಾರ್ಮಿಕರು ಇಲ್ಲಿಯೇ ಉಳಿಯಬೇಕಾಯಿತು.

ಇವರಿಗೆ ಅಗತ್ಯವಾಗಿರುವ ಸಾವಿರಾರು ನೀರಿನ ಬಾಟಲಿಗಳನ್ನು ತರಿಸಿ ಸ್ವತ: ಅಧಿಕಾರಿಗಳು, ಪೊಲೀಸರೇ ವಿತರಿಸಿದರು. ಎಸ್ಸೈ ಸಂಗೀತಾ ಸ್ಥಳೀಯರ ಸಹಕಾರದೊಂದಿಗೆ ನಸುಕಿನ ವೇಳೆ ಮೂರು ಗಂಟೆಗೆ ದಿನಸಿ ಅಂಗಡಿಗಳನ್ನು ತೆರೆಸಿ ದಾನಿಗಳ ನೆರವಿನಿಂದ ಸುಮಾರು 1200 ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಮಾಡಿದರು.

ಅದೇ ರೀತಿ ಎಂ.ಎಂ.ಹೌಸ್ ಶಿರೂರು ಹಾಗೂ ಅರುಣ್ ಪಬ್ಲಿಸಿಟಿ ವತಿ ಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರದ ಬಳಿಕ ಬೆಳಗ್ಗೆ 10 ಗಂಟೆ ಸುಮಾರಿಗೆ ಎಲ್ಲ ವಲಸೆ ಕಾರ್ಮಿಕರನ್ನು ಮನವೊಲಿಸಿ ವಾಪಾಸ್ಸು ಉಡುಪಿಗೆ ಕಳುಹಿಸಿಕೊಡುವಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಯಶಸ್ವಿ ಯಾದರು.

ಗಡಿಯಲ್ಲಿ ಮುಂದುವರೆದ ತಪಾಸಣೆ

ಶಿರೂರು, ಕೊಲ್ಲೂರು, ಹೊಸಂಗಡಿ ಸೇರಿದಂತೆ ಜಿಲ್ಲೆಯ ಎಲ್ಲ ಗಡಿಭಾಗ ಗಳಲ್ಲಿ ಅಂತರ್ ಜಿಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾ ಗಿದ್ದು, ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಶಿರೂರು ಟೋಲ್‌ಗೇಟ್ ಬಳಿ ವಾಹನ ತಪಾಸಣೆ ಮುಂದುವರೆದಿದ್ದು, ಆಹಾರ ಸಾಮಗ್ರಿ, ಅಂಬ್ಯುಲೆನ್ಸ್, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News