ಮಂಗಳೂರು : ಟೀಂ ಬಿ- ಹ್ಯೂಮನ್, ಎನ್‌ಎಂಸಿ ಸೇವಾ ತಂಡದಿಂದ ವಲಸೆ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರಿಗೆ ಆಹಾರ ಪೂರೈಕೆ

Update: 2020-03-28 17:55 GMT

ಮಂಗಳೂರು, ಮಾ.28: ಕೊರೋನ ವೈರಸ್ ಭೀತಿಯಿಂದ ಲಾಕ್‌ಡೌನ್ ಆದ ಪರಿಣಾಮ ನಗರದ ನೆಹರೂ ಮೈದಾನ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿರುವ ದಿನಗೂಲಿ ಮತ್ತು ವಲಸೆ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು ಹಾಗೂ ಹೊರ ರಾಜ್ಯದಿಂದ ಬಂದು ಸಂಕಷ್ಟದಲ್ಲಿ ಸಿಲುಕಿರು ವವರಿಗೆ ಮಂಗಳೂರಿನ ‘ಟೀಂ ಬಿ- ಹ್ಯೂಮನ್ ಮತ್ತು ಎನ್‌ಎಂಸಿ ಸೇವಾ ತಂಡ’ವು ಕಳೆದ ನಾಲ್ಕು ದಿನದಿಂದ ಆಹಾರ ಪೂರೈಸಿ ಗಮನ ಸೆಳೆಯುತ್ತಿದೆ.

ಕಳೆದೊಂದು ವಾರದಿಂದ ಜಿಲ್ಲೆಯು ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಮತ್ತು ಹೋಟೆಲ್ ಹಾಗೂ ಇಂದಿರಾ ಕ್ಯಾಂಟೀನ್‌ಗಳು ಕೂಡ ಮುಚ್ಚಿರುವುದರಿಂದ ಸಮಸ್ಯೆಗೆ ಸಿಲುಕಿರುವ ಮತ್ತು ರಸ್ತೆ, ಅಂಗಡಿ ಬಾಗಿಲುಗಳ ಮುಂದೆ ಹಸಿವು ತಾಳಲಾಗದೆ, ಊರಿಗೂ ಹೋಗಲಾಗದೆ ಇದ್ದವರಿಗೆ ಬೆಳಗ್ಗೆ ಚಹಾ ಮತ್ತು ಬಿಸ್ಕೆಟ್, ಮಧ್ಯಾಹ್ನ ಅನ್ನ, ದಾಲ್, ಉಪ್ಪಿನಕಾಯಿ ಹಾಗೂ ರಾತ್ರಿ ಚಪಾತಿ, ಪಲ್ಯವನ್ನು ನೀಡಿ ಹೊಟ್ಟೆ ತುಂಬಿಸುವ ಸೇವೆಯಲ್ಲಿ ಈ ತಂಡ ಸಕ್ರಿಯವಾಗಿದೆ. ಪ್ರತೀ ದಿನವೂ ಮೂರು ಹೊತ್ತು ತಲಾ 300ರಷ್ಟು ಮಂದಿಗೆ ಜಾತಿ, ಮತ, ಭೇದವಿಲ್ಲದೆ ಆಹಾರ ವಿತರಿಸಿ ಹೊಟ್ಟೆ ತಣಿಸುತ್ತಿದೆ.

ಶನಿವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೇರಳ ಮೂಲದ 25ಕ್ಕೂ ಅಧಿಕ ರೋಗಿಗಳು ಮತ್ತು ಅವರನ್ನು ಉಪಚರಿಸುವವರು ಆಹಾರವಿಲ್ಲದೆ ತೊಂದರೆಗೀಡಾಗಿದ್ದಾರೆ ಎಂಬ ಮಾಹಿತಿ ಪಡೆದ ಈ ತಂಡವು ಆಹಾರ ಪೂರೈಸಿದೆ. ಅಲ್ಲದೆ ನಗರದ ಲೇಡಿಗೋಶನ್ ಆಸ್ಪತ್ರೆ ಯಲ್ಲೂ 155 ಮಂದಿಗೆ ಆಹಾರದ ಆವಶ್ಯಕತೆ ಇದೆ ಎಂಬ ಮಾಹಿತಿ ಬಂದ ಮೇರೆಗೆ ಅಲ್ಲಿಗೂ ತೆರಳಿ ಆಹಾರ ಪೂರೈಸಲಾಗಿದೆ ಎಂದು ಈ ತಂಡದ ಪ್ರಮುಖರಾದ ಉದ್ಯಮಿ ಆಸಿಫ್ ಡೀಲ್ಸ್ ತಿಳಿಸಿದ್ದಾರೆ.

ಪಾಸ್ ಸಮಸ್ಯೆ: ನಾವು ಇನ್ನೂ ಕೂಡ ಈ ಸೇವೆಯನ್ನು ಮುಂದುವರಿಸಲು ಬದ್ಧರಿದ್ದೇವೆ. ಆದರೆ ಅರ್ಹರಿಗೆ ಆಹಾರ ಪೂರೈಸಲು ಜಿಲ್ಲಾಡಳಿತ ದಿಂದ ನಮಗೆ ‘ಪಾಸ್’ನ ಅಗತ್ಯವಿದೆ. ಅದನ್ನು ನೀಡುವಂತೆ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸಿಲ್ಲ. ನಮ್ಮಂತೆ ಇನ್ನಷ್ಟು ಸಾಮಾಜಿಕ ಕಳಕಳಿಯ ಸಂಸ್ಥೆಗಳು ‘ಪಾಸ್’ ಸಿಗದೆ ಸಮಸ್ಯೆಗೆ ಸಿಲುಕಿದೆ. ಹಾಗಾಗಿ ಜಿಲ್ಲಾಡಳಿತವು ಸಮಾಜ ಸೇವಾ ಸಂಸ್ಥೆಗಳಿಗೆ ಪಾಸ್ ವಿತರಿಸಿ ಬಡವರ ಹೊಟ್ಟೆ ತಣಿಸಲು ಅವಕಾಶ ಮಾಡಿಕೊಡಬೇಕು ಎಂದು ಆಸಿಫ್ ಡೀಲ್ಸ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News