ಲಾಕ್‌ಡೌನ್: ಕೊಪ್ಪಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉಳ್ಳಾಲದ 20 ಕಾರ್ಮಿಕರು

Update: 2020-03-28 16:13 GMT

ಉಳ್ಳಾಲ, ಮಾ.28: ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶವೇ ಲಾಕ್‌ಡೌನ್ ಆಗಿರುವ ಈ ಸಂದರ್ಭದಲ್ಲಿ ಎಲ್ಲೆಡೆ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಅದೇರೀತಿ ಉಳ್ಳಾಲ ಕಡೆಯಿಂದ ಕೆಲಸದ ನಿಮಿತ್ತ ಕೊಪ್ಪಳಕ್ಕೆ ತೆರಳಿರುವ 20 ಕಾರ್ಮಿಕರು ಊರಿಗೆ ಹಿಂದಿರುಗಲಾಗದ ಸಮಸ್ಯೆಗೆ ಸಿಲುಕಿದ್ದಾರೆ.

ಮಾ.7ರಂದು ಉಳ್ಳಾಲ, ದೇರಳಕಟ್ಟೆ, ಜೋಕಟ್ಟೆ, ಕಣ್ಣೂರು ಬಜಾಲ್ ಮೂಲದ 20 ಕಾರ್ಮಿಕರು ಮಾರ್ಬಲ್ ಲೋಡಿಂಗ್ ಕೆಲಸಕ್ಕಾಗಿ ಯುಎಚ್‌ಎಲ್ ಲಾಜಿಸ್ಟಿಕ್ ಕಂಪೆನಿಯ ಬಸ್ಸಿನಲ್ಲಿ ಕೊಪ್ಪಳಕ್ಕೆ ತೆರಳಿದ್ದರು. ಈ ತಂಡದಲ್ಲಿ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಬಸ್ ಚಾಲಕ ಸಿದ್ದೀಕ್, ಕೋಟೆಪುರ ನಿವಾಸಿಗಳಾದ ರಿಯಾಝ್, ಅಮೀರ್, ಉಸ್ಮಾನ್, ಝಹೀರ್, ಮನ್ಸೂರ್ ಪೊಡಿಮೋನು, ಅಳೇಕಲ ನಿವಾಸಿಗಳಾದ ನೌಫಲ್, ಮಿಸ್ಹಾಬ್ , ಝಿಯಾ ಪೊಡಿಯ, ಸುಹೈಲ್ ಬಸ್ತಿಪಡ್ಪುಮುಸ್ತಫ, ಖಾದರ್ ರಾಬಿಯತ್ ಮುಕ್ಕಚ್ಚೇರಿ, ಜೋಕಟ್ಟೆ ನಿವಾಸಿ ಸಹೀರ್, ಫೈಝಲ್ ಕಣ್ಣೂರು, ಬಜಾಲ್ ನಿವಾಸಿ ರಫೀಕ್, ದೇರಳಕಟ್ಟೆ ಯು ಹಸೈನಾರ್ ಎಂಬವರಿದ್ದಾರೆ.

ಈ ತಂಡ ಮಾ.21ರಂದು ಹೋದ ಕೆಲಸ ಮುಗಿಸಿ ಮರುದಿನ (ಮಾ.22) ಊರಿಗೆ ಹಿಂದಿರುಗಲು ನಿರ್ಧರಿಸಿತ್ತು. ಆದರೆ ರವಿವಾರ ಜನತಾ ಕರ್ಫ್ಯೂ ಘೋಷಣೆಯಾಗಿತ್ತು. ಬಳಿಕ ಸೋಮವಾರ ಕೆಲವೊಂದು ಜಿಲ್ಲೆಗಳನ್ನು ರಾಜ್ಯ ಸರಕಾರ ಬಂದ್ ಮಾಡಿದ್ದರಿಂದ ವಾಪಸ್ ಊರಿಗೆ ಬರಲು ಅವಕಾಶ ಸಿಗಲಿಲ್ಲ. ಆ ಬಳಿಕ ರಾಜ್ಯ ಸೇರಿದಂತೆ ದೇಶವೇ ಲಾಕ್‌ಡೌನ್ ಆಗಿದ್ದರಿಂದ ಈ ಕಾರ್ಮಿಕರು ಅತ್ತ ಕೆಲಸವೂ ಇಲ್ಲದೇ, ಇತ್ತ ಊರೂ ತಲುಪಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸದ್ಯ ಈ ಕಾರ್ಮಿಕರಿಗೆ ಯುಎಚ್‌ಎಲ್ ಲಾಜಿಸ್ಟಿಕ್ ಕಂಪೆನಿ ಆಹಾರದ ವ್ಯವಸ್ಥೆ ಕಲ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News