ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಸಂಖ್ಯೆಯಲ್ಲಿ ಹೆಚ್ಚಳ

Update: 2020-03-28 16:19 GMT

ಮಂಗಳೂರು, ಮಾ.28: ದ.ಕ.ಜಿಲ್ಲೆಯಲ್ಲಿ ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಕೂಡ ದಿನದಿಂದ ದಿನಕ್ಕೆ ಕೊರೋನ ಹಾವಳಿ ಭೀತಿ ಸೃಷ್ಟಿಸುತ್ತಿದೆ. ಶನಿವಾರ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ವರದಿಯ ಪ್ರಕಾರ 3,164 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ಉಳಿದಂತೆ ಆರೋಗ್ಯ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಶನಿವಾರ 94 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,209 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ.

ಈ ಮಧ್ಯೆ ಶನಿವಾರ ಜಿಲ್ಲೆಯ 25 ಮಂದಿಯ ಗಂಟಲು ದ್ರವವನ್ನು ತಪಾಸಣೆಗೆ ರವಾನಿಸಲಾಗಿದೆ. 29 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 20 ಮಂದಿ 28 ದಿನದ ನಿಗಾ ಅವಧಿ ಪೂರೈಸಿದ್ದಾರೆ. ಶನಿವಾರ 15 ಮಂದಿಯ ತಪಾಸಣೆಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಅಲ್ಲದೆ 6 ಮಂದಿಯನ್ನು ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ.

ಜಿಲ್ಲೆಯ ಆಶಾ ಕಾರ್ಯಕರ್ತೆಯರು ಈವರೆಗೆ 3,45,266 ಮನೆಗಳಿಗೆ ಭೇಟಿ ನೀಡಿ 14,12,345 ಮಂದಿಗೆ ಕೊರೋನ ವೈರಸ್ ತಡೆಗಟ್ಟಲು ವಿಶೇಷ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News