'ಪೊಲೀಸರಿಂದಲೂ ಕೊರೋನ ವೈರಸ್ ಹರಡುವ ಸಾಧ್ಯತೆ'

Update: 2020-03-28 16:23 GMT

ಮಂಗಳೂರು, ಮಾ. 28: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದರ ಹೊರತಾಗಿಯೂ ಕರ್ತವ್ಯ ನಿರತ ಪೊಲೀಸರಿಂದಲೂ ಕೂಡ ಕೊರೋನ ವೈರಸ್ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಜರುಗಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ್ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ರಾಜ್ಯ ಮಾನವ ಹಕ್ಕುಗಳ ಅಯೋಗಕ್ಕೆ ದೂರು ನೀಡಿದ್ದಾರೆ.

ಪೊಲೀಸರು ಬರೀ ಕೈಯಲ್ಲಿ ಹಲವಾರು ಮಂದಿಯನ್ನು ಹಿಡಿದು, ಲಾಠಿಯಲ್ಲಿ ಬಡಿದು ದೌರ್ಜನ್ಯ ಎಸಗುತ್ತಾರೆ. ಇದರಿಂದ ಇದು ಕೊರೋನ ವೈರಸ್ ತಗುಲಲು ಕಾರಣವಾಗಬಹುದು. ಇನ್ನು ಕೇಂದ್ರ ಮತ್ತು ರಾಜ್ಯ ಸರಕಾರವು ಪ್ರಜಾಪ್ರಭುತ್ವ ರಾಷ್ಟ್ರವನ್ನು ಪೊಲೀಸ್ ರಾಷ್ಟ್ರವನ್ನಾಗಿ ಮಾಡಲು ಹೊರಟಿವೆ. ಲಾಕ್‌ಡೌನ್ ಘೋಷಿಸುವ ಸಂದರ್ಭ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಪೊಲೀಸರನ್ನು ಬಳಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಜನರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಿದ್ದಾಗ ಜನರು ಅದನ್ನು ಪಡಕೊಳ್ಳುವ ಸಲುವಾಗಿ ಅಂಗಡಿಗಳನ್ನು ಹುಡುಕಿಕೊಂಡು ಹೊಗುವುದು ಸಾಮಾನ್ಯವಾಗಿದೆ. ಆವಾಗ ಪೊಲೀಸರು ದೌರ್ಜನ್ಯ ಎಸಗುತ್ತಾರೆ. ಹಲವು ಮೆಡಿಕಲ್ ಕ್ಲಿನಿಕ್‌ಗಳು ತೆರೆಯುತ್ತಿಲ್ಲ. ಜನಸಾಮಾನ್ಯರಿಗೆ ಆರೋಗ್ಯ ಸಮಸ್ಯೆಯಾದರೆ ಪರದಾಡುವಂತಾಗಿದೆ. ಕಾರ್ಖಾನೆಗಳು ಮುಚ್ಚಿದ್ದರಿಂದ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಕಾರ್ಮಿಕರು ಮನೆಗೆ ತಲುಪಲಾಗದೆ ಅತಂತ್ರರಾಗಿದ್ದಾರೆ. ಕೆಲವು ಕಡೆ ಮುಸ್ಲಿಮರನ್ನು ಮಸೀದಿಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆ. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಮಾನವ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಆಸಕ್ತಿ ವಹಿಸಿದರೂ ಕೂಡ ಜಿಲ್ಲಾಡಳಿತವು ಅವರಿಗೆ ಪಾಸ್ ವ್ಯವಸ್ಥೆ ಕಲ್ಪಿಸದ ಕಾರಣ ಸಮಸ್ಯೆಯು ಜಟಿಲವಾಗುತ್ತಿದೆ. ಒಟ್ಟಿನಲ್ಲಿ ರಕ್ಷಣೆ ನೀಡಬೇಕಾದ ಪೊಲೀಸರು ಲಾಕ್‌ಡೌನ್ ಜಾರಿಯನ್ನು ದುರುಪಯೋಗಪಡಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಕಬೀರ್ ಉಳ್ಳಾಲ್ ದೂರಿನಲ್ಲಿ  ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News