ತಮಿಳರನ್ನು ಕೊಂದ ಲಂಕಾ ಸೇನಾಧಿಕಾರಿಗೆ ಅಧ್ಯಕ್ಷರಿಂದ ಕ್ಷಮೆ: ವಿಶ್ವಸಂಸ್ಥೆ ಖಂಡನೆ

Update: 2020-03-28 18:43 GMT

ಕೊಲಂಬೊ, ಮಾ. 28: ಶ್ರೀಲಂಕಾದ ಆಂತರಿಕ ಯುದ್ಧದ ಅವಧಿಯಲ್ಲಿ ತಮಿಳು ನಾಗರಿಕರನ್ನು ಬರ್ಬರವಾಗಿ ಹತ್ಯೆಗೈದಿರುವುದಕ್ಕಾಗಿ ಮರಣದಂಡನೆಗೆ ಒಳಗಾಗಿದ್ದ ಸೇನಾಧಿಕಾರಿಯೊಬ್ಬನಿಗೆ ದೇಶದ ಅಧ್ಯಕ್ಷರು ಕ್ಷಮಾದಾನ ಮಾಡಿ ಬಿಡುಗಡೆ ಮಾಡಿರುವುದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಖಂಡಿಸಿದ್ದಾರೆ.

ಕ್ಷಮಾದಾನವು ಬಲಿಪಶುಗಳಿಗೆ ಮಾಡಿದ ದ್ರೋಹವಾಗಿದೆ ಹಾಗೂ ಯುದ್ಧಾಪರಾಧಗಳು, ಮಾನವತೆಯ ವಿರುದ್ಧದ ಅಪರಾಧಗಳು ಮತ್ತು ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆಗಳಿಗೆ ಅರ್ಥಪೂರ್ಣ ಉತ್ತರದಾಯಿತ್ವವನ್ನು ನಿಗದಿಪಡಿಸುವ ಅಂತರ್‌ರಾಷ್ಟ್ರೀಯ ಮಾನವಹಕ್ಕು ಬದ್ಧತೆಗಳನ್ನು ಈಡೇರಿಸುವಲ್ಲಿನ ಶ್ರೀಲಂಕಾದ ವೈಫಲ್ಯಕ್ಕೆ ಇನ್ನೊಂದು ಉದಾಹರಣೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ (ಯುಎನ್‌ಎಚ್‌ಸಿಆರ್) ಮಿಶೆಲ್ ಬ್ಯಾಚಲೆಟ್ ಹೇಳಿದ್ದಾರೆ ಎಂದು ‘ಕೊಲಂಬೊ ಗಝೆಟ್’ ವರದಿ ಮಾಡಿದೆ.

ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಗುರುವಾರ ಮಾಜಿ ಸಾರ್ಜಂಟ್ ಸುನೀಲ್ ರತ್ನಾಯಕೆಗೆ ಕ್ಷಮಾದಾನ ನೀಡಿದ್ದರು. 2000ದಲ್ಲಿ ಐದು ವರ್ಷದ ಮಗು ಸೇರಿದಂತೆ 8 ತಮಿಳು ನಾಗರಿಕರನ್ನು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕಾಗಿ 2015ರಲ್ಲಿ ನ್ಯಾಯಾಲಯವೊಂದು ಮರಣ ದಂಡನೆ ವಿಧಿಸಿತ್ತು. ಆ ತೀರ್ಪನ್ನು ಶ್ರೀಲಂಕಾ ಸುಪ್ರೀಮ್ ಕೋರ್ಟ್ 2019 ಮೇ ತಿಂಗಳಲ್ಲಿ ಎತ್ತಿ ಹಿಡಿದಿತ್ತು.

ದಶಕಗಳ ಕಾಲ ನಡೆದ ಆಂತರಿಕ ಯುದ್ಧದ ಅವಧಿಯಲ್ಲಿ ನಡೆದಿದೆಯೆನ್ನಲಾದ ಮಾನವಹಕ್ಕು ಉಲ್ಲಂಘನೆ ಪ್ರಕರಣಗಳ ಪೈಕಿ ಆರೋಪಿಗಳಿಗೆ ಶಿಕ್ಷೆಯಾದ ಅಪರೂಪದ ಪ್ರಕರಣಗಳ ಪೈಕಿ ಇದು ಒಂದಾಗಿದೆ.

ಒಳಗೆ ಬಾಕ್ಸ್

ಹೈಕಮಿಶನರ್‌ಗೆ ಆಘಾತ

ಮಿರುಸುವಿಲ್ ಹತ್ಯಾಕಾಂಡ ಪ್ರಕರಣದ ದೋಷಿಗೆ ಶ್ರೀಲಂಕಾ ಅಧ್ಯಕ್ಷರು ಕ್ಷಮಾದಾನ ಮಾಡಿ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ ಎಂಬ ವರದಿಗಳಿಂದ ಹೈಕಮಿಶನರ್ ಆಘಾತಗೊಂಡಿದ್ದಾರೆ ಎಂದು ಯುಎನ್‌ಎಚ್‌ಸಿಆರ್ ವಕ್ತಾರ ರೂಪರ್ಟ್ ಕಾಲ್ವಿಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News