ಫ್ರಾನ್ಸ್: ಒಂದೇ ದಿನದಲ್ಲಿ 299 ಸಾವು

Update: 2020-03-28 19:07 GMT

ಪ್ಯಾರಿಸ್ (ಫ್ರಾನ್ಸ್), ಮಾ. 28: ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ 299 ಮಂದಿ ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್ ಶುಕ್ರವಾರ ವರದಿ ಮಾಡಿದೆ. ಇದರೊಂದಿಗೆ ಆ ದೇಶದಲ್ಲಿ ಈ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ 1,995ಕ್ಕೆ ಏರಿದೆ.

ದೇಶದಲ್ಲಿ ಈವರೆಗೆ 32,964 ಮಂದಿಯಲ್ಲಿ ಕೊರೋನವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಫ್ರಾನ್ಸ್‌ನ ಆರೋಗ್ಯ ಅಧಿಕಾರಿ ಜೆರೋಮ್ ಸಾಲೊಮನ್ ಸುದ್ದಿಗಾರರಿಗೆ ತಿಳಿಸಿದರು. ಹೆಚ್ಚು ಅಪಾಯಕ್ಕೆ ಗುರಿಯಾಗಿರುವ ರೋಗಿಗಳಿಗೆ ಮಾತ್ರ ಪರೀಕ್ಷೆ ನಡೆಸುತ್ತಿರುವುದರಿಂದ ಸೋಂಕಿತರ ನೈಜ ಸಂಖ್ಯೆ ತುಂಬಾ ಹೆಚ್ಚಾಗಿರುವ ಸಾಧ್ಯತೆಯಿದೆ ಎಂದರು.

ಫ್ರಾನ್ಸ್‌ನ ದೈನಂದಿನ ಸಾವಿನ ಸಂಖ್ಯೆ ಗುರುವಾರ ವರದಿಯಾಗಿರುವ 365ಕ್ಕಿಂತ ಕಡಿಮೆಯಾಗಿದೆ.

ಬೀಗಮುದ್ರೆ 2 ವಾರ ವಿಸ್ತರಣೆ

ಫ್ರಾನ್ಸ್ ಶುಕ್ರವಾರ ತನ್ನ ಕೊರೋನವೈರಸ್ ಬೀಗಮುದ್ರೆಯನ್ನು ಇನ್ನೆರಡು ವಾರಗಳ ಕಾಲ ವಿಸ್ತರಿಸಿದೆ. ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ‘ಕಷ್ಟದ ದಿನಗಳು’ ಬರಲಿವೆ ಎಂದು ಫ್ರಾನ್ಸ್ ಪ್ರಧಾನಿ ಎಡ್ವರ್ಡ್ ಫಿಲಿಪ್ ಎಚ್ಚರಿಸಿದ್ದಾರೆ. ಫ್ರಾನ್ಸ್‌ನಲ್ಲಿ ಬೀಗಮುದ್ರೆ ಎಪ್ರಿಲ್ 15ರವರೆಗೆ ಮುಂದುವರಿಯಲಿದೆ.

‘‘ನಾವು ಬಿಕ್ಕಟ್ಟಿನಲ್ಲಿದ್ದೇವೆ. ಇದು ಮುಂದುವರಿಯುತ್ತದೆ. ನಮ್ಮ ಈಗಿನ ಆರೋಗ್ಯ ವ್ಯವಸ್ಥೆಯಲ್ಲಿ ಇದು ಶೀಘ್ರದಲ್ಲಿ ಸುಧಾರಿಸುವಂತೆ ಕಾಣಿಸುವುದಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News