ವಿರಳಾತಿವಿರಳ ಪ್ರಕರಣ: ಕೊರೋನ ವೈರಸ್ ಗೆ ಹಸುಳೆ ಬಲಿ

Update: 2020-03-29 04:33 GMT

ವಾಷಿಂಗ್ಟನ್ : ಅಮೆರಿಕದಲ್ಲಿ ಹಸುಳೆಯೊಂದು ಕೊರೋನ ವೈರಸ್ ಸೋಂಕಿಗೆ ಬಲಿಯಾಗಿದ್ದು, ಇಡೀ ವಿಶ್ವದಲ್ಲೇ ಇದು ತೀರಾ ವಿರಳ ಪ್ರಕರಣ ಎನಿಸಿಕೊಂಡಿದೆ.

ಅಮೆರಿಕದ ಇಲಿನಾಯಿಸ್ ನಲ್ಲಿ ಈ ಸಾವು ಸಂಭವಿಸಿದೆ ಎಂದು ಗವರ್ನರ್ ಜೆ.ಬಿ.ಪ್ರಿಟ್ಜಕರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಈ ಸಾವಿನಿಂದ ತಾವೇ ಆತಂಕಗೊಂಡಿರುವುದಾಗಿ ಅವರು ಹೇಳಿದರು. ಚಿಕಾಗೋದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವೊಂದು ಈ ಸೋಂಕಿಗೆ ಬಲಿಯಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕೋವಿಡ್-19 ಸೋಂಕಿನಿಂದ ಒಂದು ವರ್ಷಕ್ಕಿಂತ ಕೆಳಗಿನ ಮಗು ಮೃತಪಟ್ಟ ನಿದರ್ಶನ ಇಲ್ಲ ಎಂದು ಇಲಾಖೆಯ ನಿರ್ದೇಶಕ ಜೋಝಿ ಎಜೈಕ್ ಹೇಳಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದು ಎಷ್ಟು ಕಠಿಣ ಸುದ್ದಿ ಎನ್ನುವುದು ನನಗೆ ಗೊತ್ತಿದೆ. ಇದು ತೀರಾ ಎಳೆಯ ಮಗು. ಈ ಪುಟ್ಟ ಮಗುವಿನ ಕುಟುಂಬಕ್ಕೆ ತೀರಾ ಆಘಾತಕಾರಿ. ನಾವೆಲ್ಲರೂ ಶೋಕಿಸಬೇಕಾದ ಸಂಗತಿ ಎಂದು ಗವರ್ನರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮಧ್ಯೆ ಅಮೆರಿಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 2000ವನ್ನು ದಾಟಿದೆ. ಅಮೆರಿಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಇಟೆಲಿ, ಸ್ಪೇನ್ ಹಾಗೂ ಚೀನಾಗಿಂತ ಕಡಿಮೆ ಇದ್ದರೂ, ಒಂದೇ ದಿನ 450 ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇಲಿನಾಯಿಸ್‌ನಲ್ಲಿ ಒಂದೇ ದಿನ 13 ಮಂದಿ ಮೃತಪಟ್ಟಿದ್ದು, ಈ ಮಗು ಕೂಡಾ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News