ಉಡುಪಿ ಜಿಲ್ಲೆಯಲ್ಲೇ ಪಿಪಿಇ ಕಿಟ್‌ ಗಳ ಉತ್ಪಾದನೆ

Update: 2020-03-29 08:01 GMT

ಕಿಟ್ ಒಂದರ ವೆಚ್ಚ 2,000-3,000 ರೂ.!

ಉಡುಪಿ ಜಿಲ್ಲಾಡಳಿತ ಗುರುತಿಸಿರುವ ಉತ್ಪಾದನಾ ಘಟಕವು ಕನ್ನಡಕಗಳು, ಮುಖ ಗುರಾಣಿ, ಮಾಸ್ಕ್, ಕೈಗವಸುಗಳು, ಗೌನ್ಸ್, ಹೆಡ್‌ಕವರ್ ಮತ್ತು ಶೂ ಕವರ್‌ಗಳನ್ನು ಒಳಗೊಂಡ ಸಂಪೂರ್ಣ ಕಿಟ್‌ನ್ನು ಪೂರೈಸಲಿದೆ. ಮೊದಲ ಹಂತದ ಕಿಟ್‌ಗಳ ಪೂರೈಕೆಗೆ ಆದೇಶ ನೀಡಲಾಗಿದ್ದು, ಇದನ್ನು ಜಿಲ್ಲೆಯಲ್ಲಿ ಆದ್ಯತೆಯ ಮೇರೆಗೆ ಬಳಸಿಕೊಳ್ಳಲಾಗುತ್ತದೆ. ಈ ಘಟಕದಲ್ಲಿ ತಯಾರಿಸುವ ಒಂದು ಪಿಪಿಇ ಕಿಟ್‌ಗೆ 2000 ರೂ.ನಿಂದ 3000 ರೂ.ವರೆಗೆ ವೆಚ್ಚವಾಗಲಿದ್ದು, ಇದಕ್ಕೆ ಜಿಲ್ಲಾಡಳಿತವು ತನ್ನ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿರುವ ಹಣವನ್ನು ಬಳಕೆ ಮಾಡಿಕೊಳ್ಳಲಿದೆ. ಮುಂದೆ ಅಗತ್ಯ ಬಿದ್ದರೆ ಇನ್ನಷ್ಟು ಕಿಟ್‌ಗಳನ್ನು ಇದೇ ಘಟಕದಲ್ಲಿ ಉತ್ಪಾದಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಉಡುಪಿ, ಮಾ.28: ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿ ಚಿಕಿತ್ಸೆಯ ಸಮಯದಲ್ಲಿ ವೈದ್ಯರಿಗೆ ಅತ್ಯಗತ್ಯವಾಗಿರುವ ವೈಯಕ್ತಿಕ ರಕ್ಷಣಾ ಸಲಕರಣೆ (ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್-ಪಿಪಿಇ) ಕಿಟ್‌ಗಳ ಕೊರತೆ ಉಂಟಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತವೇ ಸ್ಥಳೀಯ ಘಟಕವೊಂದರಲ್ಲಿ ಈ ಕಿಟ್‌ಗಳನ್ನು ತಯಾರಿಸಲು ನಿರ್ಧರಿಸಿದೆ.

ಜಿಲ್ಲೆಯಲ್ಲಿ ಕೋವಿಡ್‌ವೈರಸ್ ಶಂಕೆಯಲ್ಲಿ ಪರೀಕ್ಷೆ ಗಾಗಿ ದಾಖಲಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಪಿಪಿಇ ಕಿಟ್‌ಗಳ ಅಭಾವ ತಲೆದೋರಿದೆ. ರಾಜ್ಯ ಸರಕಾರದಿಂದ ಈ ಕಿಟ್‌ಗಳ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿ ಸುವಂತೆ ಮಾಡಿದೆ. ಇದು ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ಸರಕಾರ ನೀಡುವ ಕಿಟ್‌ಗಳನ್ನು ಅವಲಂಬಿತವಾಗಿರದೆ ಸ್ವತಃ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಮ್ಮಲ್ಲೇ ಈ ಕಿಟ್‌ಗಳನ್ನು ಉತ್ಪಾದಿಸುವ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಿದೆ. ಅದಕ್ಕಾಗಿ ಈ ಕಿಟ್‌ಗಳನ್ನು ಉತ್ಪಾದಿಸುವ ಘಟಕವನ್ನು ಜಿಲ್ಲೆಯಲ್ಲೇ ಗುರುತಿಸಲಾಗಿದೆ. ಬೈಂದೂರು ತಾಲೂಕಿನ ದಾತ್ರಿ ಎಂಬ ಉತ್ಪಾದನಾ ಘಟಕದ ಮೂಲಕ ಪಿಪಿಇ ಕಿಟ್‌ಗಳನ್ನು ತಯಾರಿಸಲು ಉದ್ದೇಶಿಸಿರುವ ಜಿಲ್ಲಾಡಳಿತ, ಆ ಮೂಲಕ ಸದ್ಯ ಒಂದು ಸಾವಿರ ಪಿಪಿಇ ಕಿಟ್‌ಗಳನ್ನು ಉತ್ಪಾದಿಸಿ ಜಿಲ್ಲೆಯ ಕೊರೋನ ವೈರಸ್ ಸಂಬಂಧ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಪೂರೈಸಲು ಯೋಜಿಸಿದೆ.

ಒಬ್ಬ ರೋಗಿಗೆ 3-10 ಕಿಟ್‌ಗಳು

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಂತೆ ಪಿಪಿಇ ಕಿಟ್‌ಗಳನ್ನು ಕೊರೋನ ವೈರಸ್ ಶಂಕಿತ ಹಾಗೂ ಸೋಂಕಿತ ರೋಗಿಗಳ ಚಿಕಿತ್ಸೆಯ ವಿವಿಧ ಪ್ರಕ್ರಿಯೆ ಸಂದರ್ಭದಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಸುರಕ್ಷತಾ ಕ್ರಮವಾಗಿ ಬಳಸಿಕೊಳ್ಳಲೇಬೇಕು. ಕೊರೋನ ವೈರಸ್ ಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗುವ ರೋಗಿಯ ಗಂಟಲು ದ್ರವ ಸಂಗ್ರಹ, ವಿವಿಧ ರೀತಿಯ ಚಿಕಿತ್ಸೆಯ ಸಂದರ್ಭ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಂದಾಜು 3ರಿಂದ 10 ಕಿಟ್‌ಗಳು ಬೇಕಾಗುತ್ತವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಅದೇ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭ ಇದಕ್ಕಿಂತ ಹೆಚ್ಚು ಅಂದರೆ 7ರಿಂದ 10 ಕಿಟ್‌ಗಳು ಅವಶ್ಯಕವಾಗಿರುತ್ತವೆ. ಈ ಕಿಟ್‌ಗಳ ಬಳಕೆ ದಿನಕ್ಕೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಮೇಲೆ ಅವಲಂಬಿತವಾಗಿರುತ್ತವೆ. ಈವರೆಗೆ ಜಿಲ್ಲೆಯಲ್ಲಿ 124 ಮಂದಿಯನ್ನು ಈ ಸೋಂಕಿನ ಶಂಕೆಯ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಾವಿರಾರು ಕಿಟ್‌ಗಳು ಬಳಕೆಯಾಗಿವೆ.

‘ಜಿಲ್ಲೆಯಲ್ಲಿ ಕಾಡುತ್ತಿರುವ ಮಾಸ್ಕ್‌ಗಳ ಕೊರತೆಗೂ ಪರಿಹಾರ ಮಾರ್ಗವನ್ನು ಕಂಡುಕೊಳ್ಳ ಲಾಗುತ್ತಿದ್ದು, ಜಿಲ್ಲೆಯಲ್ಲಿರುವ ಕಂಪೆನಿಗಳಿಂದಲೇ ಮಾಸ್ಕ್ ತಯಾರಿಸಿ ಪೂರೈಸುವಂತೆ ಮಾಡುವ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ. ಈಗಾಗಲೇ ಪಿಪಿಇ ಕಿಟ್ ಹಾಗೂ ಮಾಸ್ಕ್‌ಗಳಿಗಾಗಿ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅದು ಕೂಡ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತ ಗುರುತಿಸಿರುವ ಘಟಕದಲ್ಲಿ ಪಿಪಿಇ ಕಿಟ್‌ಗಳ ತಯಾರಿಕಾ ಕಾರ್ಯ ಈಗಾಗಲೇ ಆರಂಭವಾಗಿದ್ದು, 2-3 ದಿನಗಳಲ್ಲಿ ಇವು ಕೈಸೇರುವ ಸಾಧ್ಯತೆಗಳಿವೆ. ಈ ಮಧ್ಯೆ ರಾಜ್ಯ ಸರಕಾರ ಕೂಡ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡುವುದಾಗಿ ಹೇಳಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಪಿಪಿಇ ಕಿಟ್‌ಗಳ ಕೊರತೆ ನೀಗಬಹುದು.

 ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News