ಇಂಗ್ಲೆಂಡ್ : ಕೊರೋನ ಹೋರಾಟದಲ್ಲಿ ಮಲಯಾಳಿ ನರ್ಸ್‌ಗಳ ನಿರ್ಣಾಯಕ ಪಾತ್ರ

Update: 2020-03-29 17:58 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ. 29: ಜಗತ್ತು ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿರುವಾಗ, ಈ ಹೋರಾಟ ಮುಂಚೂಣಿಯಲ್ಲಿ ಕೇರಳದ ನರ್ಸ್‌ಗಳಿದ್ದಾರೆ.

‘ವಿದೇಶಗಳಿಗೆ ನರ್ಸ್‌ಗಳ ಪೂರೈಕೆಯ ಪ್ರಮುಖ ಮೂಲ ಭಾರತವಾಗಿದೆ’ ಎಂದು 2017ರ ವರದಿಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೇರಳದ ನರ್ಸ್‌ಗಳು ವಿದೇಶಿ ನರ್ಸ್ ಸಮುದಾಯದ ಒಂದು ದೊಡ್ಡ ಭಾಗವಾಗಿದ್ದಾರೆ.

  ‘‘ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಅಂತರ್‌ರಾಷ್ಟ್ರೀಯ ಶಿಕ್ಷಣ ಪಡೆದ ನರ್ಸ್ ಗಳ ಪೈಕಿ ಹೆಚ್ಚಿನವರು ಭಾರತದಲ್ಲಿ ತರಬೇತಿ ಪಡೆದವರು. ಎರಡನೇ ಸ್ಥಾನದಲ್ಲಿರುವವರು ಫಿಲಿಪ್ಪೀನ್ಸ್ ನಲ್ಲಿ ತರಬೇತಿ ಪಡೆದ ನರ್ಸ್‌ಗಳು. ಕೇರಳದಲ್ಲಿ ಕಲಿತಿರುವ ನರ್ಸ್‌ಗಳ ಪೈಕಿ ಶೇ.30 ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 15 ಶೇಕಡ ಆಸ್ಟ್ರೇಲಿಯದಲ್ಲಿದ್ದರೆ, ಶೇ.12 ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ನ ವೀಡಿಯೊವೊಂದರಲ್ಲಿ, ಕೇರಳದ ನರ್ಸ್‌ಗಳು ಬ್ರಿಟನ್‌ನ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ನೀಡಿರುವ ದೇಣಿಗೆಯನ್ನು ಮಾಜಿ ಬ್ರಿಟಿಷ್ ಸಂಸದೆ ಆನಾ ಸೌಬ್ರಿ ಶ್ಲಾಘಿಸಿದ್ದಾರೆ.

ಆ್ಯನ್ಸಿ ಆ್ಯಂಟು ಎಂಬ ನರ್ಸ್ ಆಕ್ಸ್‌ಫರ್ಡ್‌ಶೈರ್ ನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಹಿಂದೆ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಲು ಆರಂಭಿಸಿದಾಗ, ರೋಗಿಗಳಿಗೆ ಆಸ್ಪತ್ರೆಯಿಂದ ಹೊರಗೆ ಪ್ರತ್ಯೇಕ ಚಿಕಿತ್ಸಾ ಸ್ಥಳವನ್ನು ಸ್ಥಾಪಿಸಲಾಗಿತ್ತು.

‘‘ಹಿರಿಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವಾರ್ಡ್‌ನ ಮೆಡಿಸಿನ್ ವಿಭಾಗದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ’’ ಎಂದು ಅವರು ಹೇಳಿದರು. ‘‘ಈಗ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರಲು ಆಸ್ಪತ್ರೆಯಲ್ಲಿನ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ, ತುರ್ತು ಚಿಕಿತ್ಸೆಯ ಅಗತ್ಯವಿಲ್ಲದ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News