ಲಾಕ್‍ ಡೌನ್: ತಂತಮ್ಮ ಊರುಗಳಿಗೆ ಹಿಂದಿರುಗುವ ಯತ್ನದಲ್ಲಿ 22 ಕಾರ್ಮಿಕರ ಸಾವು

Update: 2020-03-30 09:22 GMT

ಹೊಸದಿಲ್ಲಿ: ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರಕಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ತಮ್ಮ ತವರೂರುಗಳಿಗೆ ತೆರಳಲು ಸಾವಿರಾರು ವಲಸಿಗ ಕಾರ್ಮಿಕರು  ಹತಾಶ ಯತ್ನಗಳನ್ನು ನಡೆಸುತ್ತಿರುವ ನಡುವೆಯೇ ಕನಿಷ್ಠ 22 ಮಂದಿ ವಲಸಿಗ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು thewire.in ವರದಿ ತಿಳಿಸಿದೆ.

ಮೃತಪಟ್ಟವರಲ್ಲಿ ಐದು ಮಂದಿ ಮಕ್ಕಳೂ ಸೇರಿದ್ದಾರೆ. ಇದರ ಹೊರತಾಗಿ ಬಿಹಾರದ ಭೋಜಪುರ್ ಪ್ರದೇಶದಲ್ಲಿ ಮಾರ್ಚ್ 27ರಂದು ಹಸಿವೆ ತಾಳಲಾರದೆ ಹನ್ನೊಂದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

ದಿಲ್ಲಿಯ ರೆಸ್ಟಾರೆಂಟ್ ಒಂದರಲ್ಲಿ  ಕೆಲಸಕ್ಕಿದ್ದ 39 ವರ್ಷದ ವ್ಯಕ್ತಿಯೊಬ್ಬ ಮಧ್ಯ ಪ್ರದೇಶದ ಮೊರೆನಾ ಎಂಬಲ್ಲಿಗೆ  ತೆರಳುತ್ತಿರುವ ಹಾದಿಯಲ್ಲಿ ಮಾರ್ಚ್ 28ರಂದು ಆಗ್ರಾದಲ್ಲಿ  ಅತೀವ ಸುಸ್ತಿನಿಂದ ಮೃತಪಟ್ಟಿದ್ದಾನೆ, ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆಂದು ಪೋಸ್ಟ್ ಮಾರ್ಟಂ ವರದಿ ತಿಳಿಸಿದೆ.

ಮಾರ್ಚ್ 29ರಂದು ವಲಸಿಗ ಕಾರ್ಮಿಕರ ಕುಟುಂಬಗಳ ಐದು ಮಂದಿ ಹರ್ಯಾಣದ ಬಿಲಾಸ್ಪುರ್ ಪ್ರದೇಶದಲ್ಲಿ ತಮ್ಮ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಭಾರೀ ವೇಗದಿಂದ ಬಂದ ಕ್ಯಾಂಟರ್ ವಾಹನವೊಂದು ಢಿಕ್ಕಿ ಹೊಡೆದು ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ.

ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ತಮ್ಮ ಊರಿಗೆ ಮರಳುತ್ತಿದ್ದ ವಲಸಿಗ ಕಾರ್ಮಿಕರ ಗುಂಪಿನಲ್ಲಿದ್ದ ಎಂಟು ಮಂದಿ ತೆಲಂಗಾಣದಲ್ಲಿ ಮಾರ್ಚ್ 27ರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 18 ತಿಂಗಳು ಶಿಶು, ಒಬ್ಬ ಬಾಲಕ ಹಾಗೂ ಒಂಬತ್ತು ವರ್ಷದ ಬಾಲಕಿ ಸೇರಿದ್ದಾರೆ. ಮಾರ್ಚ್ 28ರಂದು ಸೂರತ್‍ ನ ಆಸ್ಪತ್ರೆಯಿಂದ ಮನೆಗೆ ಹೋಗಲು ಯಾವುದೇ ವಾಹನ ಲಭ್ಯವಿಲ್ಲದೆ 62 ವರ್ಷದ ವ್ಯಕ್ತಿಯೊಬ್ಬ  ಎಂಟು ಕಿ.ಮೀ. ದೂರ ನಡೆದು ಸುಸ್ತಿನಿಂದ ಸಾವನ್ನಪ್ಪಿದ್ದಾನೆ ಎಂದು thewire.in ವರದಿ ತಿಳಿಸಿದೆ.

ಮಾರ್ಚ್ 26ರಂದು ಪಶ್ಚಿಮ ಬಂಗಾಲದ ಹೌರಾದಲ್ಲಿ ಹಾಲು ಖರೀದಿಸಲೆಂದು ಮನೆಯುಂದ ಹೊರಗೆ ಬಂದಿದ್ದ 32 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಥಳಿತಕ್ಕೆ ಮೃತಪಟ್ಟಿದ್ದ. ಆತ ಹೃದ್ರೋಗಿಯಾಗಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News