'ನಮ್ಮನ್ನು ಬಿಟ್ಟುಬಿಡಿ': ದಿಗ್ಬಂಧನದಲ್ಲಿ ಅಳುತ್ತಿರುವ ಕಾರ್ಮಿಕರ ವಿಡಿಯೋ ಟ್ವೀಟ್ ಮಾಡಿದ ಪ್ರಶಾಂತ್ ಕಿಶೋರ್

Update: 2020-03-30 09:33 GMT

ಪಾಟ್ನಾ: ವಲಸಿಗ ಕಾರ್ಮಿಕರು ದಿಗ್ಬಂಧನದಲ್ಲಿ ಅಳುತ್ತಾ ತಮ್ಮನ್ನು ಬಿಟ್ಟುಬಿಡುವಂತೆ ಗೋಗರೆಯುತ್ತಿರುವುದು ವಿಡಿಯೋವೊಂದನ್ನು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಇದನ್ನು ``ಭಯ ಹುಟ್ಟಿಸುವಂತಹ ಚಿತ್ರಣ'' ಎಂದು ಬಣ್ಣಿಸಿರುವ ಪ್ರಶಾಂತ್ ಕಿಶೋರ್ ಈ ಸಮಸ್ಯೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ದೂರಿದ್ದಾರೆ.

"ಜನರನ್ನು ಕೊರೋನ ಸೋಂಕಿನಿಂದ ರಕ್ಷಿಸಲು ಅಧಿಕಾರಿಗಳು ನಡೆಸುವ ಯತ್ನಗಳ ಒಂದು ಭಯ ಹುಟ್ಟಿಸುವಂತಹ ಚಿತ್ರ. ದೇಶದ ವಿವಿಧೆಡೆಗಳ ಹಾಗೂ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಬಡ ವಲಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಹಾಗೂ ಕ್ವಾರಂಟೈನ್‍ ನಲ್ಲಿರುವಂತೆ ಮಾಡಲು ನಿತೀಶ್ ಕುಮಾರ್ ಈ ರೀತಿಯ ಏರ್ಪಾಟು ಮಾಡಿದ್ದಾರೆ'' ಎಂದು #ನಿತೀಶ್‍ಮಸ್ಟ್‍ಕ್ವಿಟ್ ಎಂಬ ಹ್ಯಾಶ್ ಟ್ಯಾಗ್ ಜತೆಗೆ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಈ ವೀಡಿಯೋ ಪಾಟ್ನಾದಿಂದ ಸುಮಾರು 132 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಡಿ ಸಮೀಪದ ಸಿವಾನ್ ಎಂಬ ಪ್ರದೇಶದ್ದಾಗಿದೆ ಎಂದು ಹೇಳಲಾಗಿದೆ.

"ನಿಮ್ಮನ್ನು ಬಿಟ್ಟು ಬಿಡಲಾಗುವುದು, ಬಸ್ ಬರುತ್ತದೆ ಎಂದು ಬೆಳಗ್ಗಿನಿಂದ ಹೇಳಲಾಗುತ್ತಿದೆ, ಆದರೆ ಬಸ್ ಬಂದಿಲ್ಲ, ಅವರು ನಮ್ಮನ್ನು ಬಿಟ್ಟು ಬಿಡುತ್ತಿಲ್ಲ'' ಎಂದು  ಕಚೀರ್ಫಿನಿಂದ ಮುಖ ಮುಚ್ಚಿರುವ ವ್ಯಕ್ತಿಯೊಬ್ಬ ಅಳುತ್ತಾ ಹೇಳುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಬೀಗ ಹಾಕಲ್ಪಟ್ಟ ಗೇಟಿನ ಒಳಗಡೆಯಿಂದ ಜನರು ತಮ್ಮ ಕೈಗಳನ್ನು ಹೊರಚಾಚಿ ಸಹಾಯ ಮಾಡುವಂತೆ ಅಂಗಲಾಚುತ್ತಿರುವುದು ಕಾಣಿಸುತ್ತದೆ.

"ಇಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಎಲ್ಲರ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ಸ್ಕ್ರೀನಿಂಗ್‍ ಗೊಳಪಡಿಸಿ ನಂತರ ಅವರಿಗೆ ಆಹಾರ ನೀಡಿ ಅವರನ್ನು ಬಿಟ್ಟುಬಿಡಲಾಗುತ್ತದೆ'' ಎಂದು ಸಿವಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News