ವ್ಯರ್ಥವಾದ ದ.ಕ. ಜಿಲ್ಲಾಡಳಿತದ 3 ದಿನಗಳ ಸಂಪೂರ್ಣ ಬಂದ್: ಮಾರುಕಟ್ಟೆ ಅಂಗಡಿಗಳಲ್ಲಿ ನೂಕು ನುಗ್ಗಲು

Update: 2020-03-31 14:53 GMT

ಮಂಗಳೂರು, ಮಾ. 31: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವು ಶನಿವಾರದಿಂದ ಸೋಮವಾರದವರೆಗೆ ವಿಧಿಸಿ ಕಟ್ಟುನಿಟ್ಟಿನ ಕ್ರಮದ ಸಂಪೂರ್ಣ ಬಂದ್ ಮಂಗಳವಾರ ಸಂಪೂರ್ಣ ವ್ಯರ್ಥಗೊಂಡಿತು.

ಮೂರು ದಿನಗಳ ಬಂದ್‌ನ ಬಳಿಕ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಮಾರುಕಟ್ಟೆ, ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ನಗರದ ಜನರು ಅಂಗಡಿ, ಮಾರುಕಟ್ಟೆಗಳಿಗೆ ಮುಗಿ ಬಿದ್ದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ಕೊರೋನ ನಿಯಂತ್ರಣಕ್ಕೆ ಅತೀ ಅತಗತ್ಯವಾದ ಸಾಮಾಜಿಕ ಅಂತರವನ್ನೇ ಮರೆತು ಖರೀದಿ ನಡೆಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಜಿಲ್ಲೆಯ ಶಾಸಕರಾದಿಯಾಗಿ ಜನಪ್ರತಿನಿಧಿಗಳು ಸಾರಿ ಸಾರಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರೂ ಜನರು ಮಾತ್ರ ದಿನಬಳಕೆಯ ಖರೀದಿಯ ಭರದಲ್ಲಿ ಅದ್ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ಪೊಲೀಸರು ಜನರು ಖರೀದಿ ಸಂದರ್ಭ ಪದೇ ಪದೇ ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಂಡರೂ ಕೂಡ ಯಾರೂ ಅದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ನಗರದ ಸೆಂಟ್ರಲ್ ಮಾರುಕಟ್ಟೆ ಮಾತ್ರವಲ್ಲದೆ, ಸಣ್ಣಪುಟ್ಟ ಅಂಗಡಿ, ಸೂಪರ್ ಮಾರ್ಕೆಟ್ (ಕೆಲವು ಕಡೆ ಹೊರತುಪಡಿಸಿ)ಗಳಲ್ಲೂ ಜನ ಸರತಿ ಸಾಲಿನಲ್ಲಿ ನಿಂತಿದ್ದರೂ ಸಾಮಾಜಿಕ ಅಂತರವನ್ನು ಮರತೇ ಬಿಟ್ಟಿದ್ದರು.

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಜನ ಸಮೂಹದ ಕೇಂದ್ರವಾಗಿಬಿಟ್ಟರೆ, ದಿನಸಿ ಹಾಗೂ ತರಕಾರಿ ಖರೀದಿಗಾಗಿ ಜನರು ಇಲ್ಲಿ ಮುಗಿ ಬಿದ್ದರು. ಒಂದೆಡೆ ವಾಹನಗಳ ಪಾರ್ಕಿಂಗ್ ಇನ್ನೊಂದೆಡೆ ಜನರ ಗುಂಪುಗೂಡುವಿಕೆಯಿಂದ ಸೆಂಟ್ರಲ್ ಮಾರುಕಟ್ಟೆ ಜನಜಾತ್ರೆಯಾಗಿ ಜನಜಂಗುಳಿಯಿಂದ ತುಂಬಿತ್ತು. ಮಧ್ಯಾಹ್ನದವೆಗೂ ಈ ಪರಿಸ್ಥಿತಿ ಮುಂದುವರಿಯಿತು.

ಮಲ್ಲಿಕಟ್ಟೆ ಮಾರುಕಟ್ಟೆ ಸೇರಿದಂತೆ ಕೆಲವೆಡೆ ಅಂಗಡಿಯವರೇ ಹೆಚ್ಚಿನ ಮುತುವರ್ಜಿಯಿಂದ ವ್ಯವಸ್ಥೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಗ್ರಾಹಕರಿಗೆ ಕುಳಿತುಕೊಳ್ಳಲು ರಸ್ತೆಯಲೆ್ಲೀ ಆಸನ ವ್ಯವಸ್ಥೆ ಮಾಡಲಾಗಿತ್ತು.

ಹಿರಿಯ ನಾಗರಿಕರಿಗೆ ಆದ್ಯತೆ

ಅತ್ತಾವರದ ಬಿಗ್ ಬಝಾರ್ ಹೈಪರ್ ಮಾರ್ಕೆಟ್‌ನಲ್ಲಿಯೂ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಗಾಗಿ ಕಿ.ಮೀ.ಗಟ್ಟಲೆ ಸರತಿ ಸಾಲಿನಲ್ಲಿ ಸಾಗಿದರು. ಗ್ರಾಹಕರಿಗೆ ತಲಾ 20 ನಿಮಿಷಗಳಂತೆ ಖರೀದಿಗೆ ವ್ಯವಸ್ಥೆಯ ಜತೆಗೆ ಹಿರಿಯ ನಾಗರಿಕ ಗ್ರಾಹಕರಿಗೆ ಸರತಿ ಸಾಲಿನ ವ್ಯವಸ್ಥೆಯಿಲ್ಲದೇ ಅಲ್ಲಿನ ಸಿಬ್ಬಂದಿ ನೇರವಾಗಿ ಒಳ ಪ್ರವೇಶಿಸಲು ಅವಕಾಶ ನೀಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದರು.

ಮಧ್ಯಾಹ್ನ ಹೊತ್ತು ಅಂಗಡಿಗಳಲ್ಲಿ ಸಾಮಗ್ರಿಗಳು ಖಾಲಿ

ಬೆಳಗ್ಗೆ 6 ಗಂಟೆಯಿಂದಲೇ ಖರೀದಿ ವ್ಯವಹಾರ ಆರಂಭಗೊಂಡಂತೆಯೇ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ನಗರದ ಬಹುತೇಕ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆ, ಅಂಗಡಿಗಳಲ್ಲಿ ಬಹಳಷ್ಟು ದಿನಸಿ ಸಾಮಗ್ರಿಗಳು ಖಾಲಿಯಾಗಿದ್ದವು. ಕೋಳಿ, ಮಾಂಸದಂಗಡಿಗಳು ಕೂಡಾ ತೆರೆದಿದ್ದು, ಬಹುತೇಕ ಅಂಗಡಿಗಳಲ್ಲಿ ಮಧ್ಯಾಹ್ನದ ವೇಳೆಗೆ ಸ್ಟಾಕ್ ಖಾಲಿ ಎಂಬ ಮಾತು ಕೇಳಿ ಬಂತು.

ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯೂ

ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿಯೂ ಇಂದು ವಾಹನಗಳು ಉದ್ದುದ್ದಕ್ಕೂ ಕ್ಯೂನಲ್ಲಿ ನಿಂತಿರುವುದು ಕಂಡು ಬಂತು. ಮೂರು ದಿನಗಳಿಂದ ಸ್ತಬ್ಧವಾಗಿದ್ದ ನಗರದ ಬಹುತೇಕ ರಸ್ತೆಗಳು ಇಂದು ವಾಹನ ದಟ್ಟಣೆಯಿಂದ ಕೂಡಿತ್ತು. ಪೆಟ್ರೋಲ್, ಡೀಸೆಲ್ ಖರೀದಿ ಭರಾಟೆಯೂ ಜೋರಾಗಿತ್ತು.

ತಪ್ಪಿದ ಜಿಲ್ಲಾಡಳಿತದ ಲೆಕ್ಕಾಚಾರ 

ದ.ಕ. ಜಿಲ್ಲೆಯಲ್ಲಿ ಶನಿವಾರದಿಂದ ಸಂಪೂರ್ಣ ಬಂದ್ ಘೋಷಣೆ ಮಾಡುವ ಹಿಂದಿನ ದಿನಗಳಲ್ಲಿ ಬೆಳಗ್ಗೆ 6ರಿಂದ 12 ಗಂಟೆಯವರೆಗೆ ದಿನ ಬಳಕೆಯ ಸಾಮಗ್ರಿಗಳಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆ ಸಂದರ್ಭದಲ್ಲಿಯೂ ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ನಗರದ ಅಂಗಡಿಗಳಲ್ಲಿ ಜನ ಸೇರುತ್ತಿದ್ದರು. ಆದರೆ ಕಳೆದ ಶುಕ್ರವಾರ ಜಿಲ್ಲೆಯಲ್ಲಿ 2 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಯಿತು.

ಶನಿವಾದಿಂದ ಸೋಮವಾರದವರೆಗೆ ಸಂಪೂರ್ಣ ಬಂದ್ ಮಾಡಿ ದ.ಕ. ಜಿಲ್ಲಾಡಳಿತ ಘೋಷಣೆ ಹೊರಡಿಸಿತು. ಜನರು ರಸ್ತೆಗೆ ಇಳಿಯದಂತೆ ಪೊಲೀಸರು ಪಹರೆ ನೀಡಿದರು. ಆದರೆ ಮೂರು ದಿನಗಳ ಕಾಲ ಕೆಲವೆಡೆ ಹಾಲು ಕೂಡಾ ಸಿಗದೆ ಪರದಾಡುವಂತಾಯಿತು. ಮೂರು ದಿನಗಳ ಬಂದ್ ಬಳಿಕ ಜನರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿರುವುದರಿಂದ ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸುವುದರಿಂದ ಜನರು ಆರಾಮವಾಗಿ ಖರೀದಿಯಲ್ಲಿ ತೊಡಗುತ್ತಾರೆಂಬುದು ಜಿಲ್ಲಾಡಳಿತದ ಲೆಕ್ಕಾಚಾರವಾಗಿತ್ತು. ಆದರೆ ವಾಸ್ತವದಲ್ಲಿ ಕಳೆದ ಒಂದು ವಾರದಿಂದ ಸೂಪರ್ ಮಾರುಕಟ್ಟೆ ಸೇರಿ ದಂತೆ ಅಂಗಡಿಗಳಲ್ಲಿ ಅಗತ್ಯ ವಸ್ತುಗಳ ದಾಸ್ತಾನಿಗೇ ಕೊರತೆಯಾಗಿತ್ತು. ಇದರಿಂದಾಗಿ ಇಂದು ಜನ ಆತಂಕದಿಂದಲೇ ದಿನ ಬಳಕೆಯ ಖರೀದಿಯಲ್ಲಿ ಬೆಳಗ್ಗಿ ನಿಂದಲೇ ತೊಡಗಿಕೊಂಡರೂ ಮಧ್ಯಾಹ್ನದ ವೇಳೆಗೆ ಅಕ್ಕಿ, ತರಕಾರಿ, ಹಣ್ಣುಹಂಪಲು ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಜನಸಾಮಾನ್ಯರನ್ನು ಕಂಗೆಡಿಸಿದೆ. ಒಟ್ಟಿನಲ್ಲಿ ಜಿಲ್ಲಾಡಳಿತದ ಕ್ರಮವೇ ಸರಿಯಿಲ್ಲ ಎಂಬ ಆಕ್ರೋಶದ ಮಾತುಗಳು ಮಾರುಕಟ್ಟೆ, ಅಂಗಡಿಗಲ್ಲಿ ಜನಸಾಮಾನ್ಯರಿಂದ ಕೇಳಿ ಬಂತು.

ಕ್ಯೂ ನಿಂತರೂ ಸಾಮಗ್ರಿ ಇಲ್ಲ

ಎರಡೆರಡು ಗಂಟೆ ಅಂಗಡಿ ಎದುರು ಕ್ಯೂ ನಿಂತರೂ ಸಾಮಗ್ರಿ ಇಲ್ಲ. ಹಿಂದೆ ಕೈಯ್ಯಲ್ಲಿ ಹಣವಿದ್ದಾಗ ಸಾಮಗ್ರಿಗಳ ಖರೀದಿ ಚಿಂತೆ ಇರಲಿಲ್ಲ. ಈಗ ಹಣವೂ ಇಲ್ಲ. ಸಾಮಾನೂ ಇಲ್ಲದಂತಾಗಿದೆ ಎಂದು ವಯೋವೃದ್ಧರೊಬ್ಬರು ನಗರದ ಅಂಗಡಿಯೊಂದರಲ್ಲಿ ತಮಗೆ ಬೇಕಾದ ಸಾಮಾನು ದೊರಕದಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಯಾಕಪ್ಪಾ ಈ ಮಹಾಮಾರಿ ಬಂತೋ
ನಗರದ ಸೂಪರ್ ಮಾರ್ಕೆಟೊಂದರಲ್ಲಿ ಕ್ಯೂ ನಿಂತಿದ್ದ ಮಹಿಳೆಯೊಬ್ಬರು, ‘‘ಈ ಮಹಾಮಾರಿ ಯಾಕಪ್ಪಾ ಬಂತೋ! ಮನೆ ಕೆಲಸ ಮಾಡಬೇಕು. ಅದರ ಜತೆ ಇಲ್ಲಿ ಕ್ಯೂ ನಿಲ್ಲಬೇಕು. ಅದೂ ಅಗತ್ಯ ವಸ್ತುಗಳೂ ಇಲ್ಲ. ಅಂಗಡಿಯಲ್ಲಿ ಸಾಕಷ್ಟು ಸಂಗ್ರಹವೇ ಇಲ್ಲ. ಸಾಮಾನು ಜೋಡಿಸಿಡಲು ಕೆಲಸದವರೂ ಇಲ್ಲ. ಒಳಬರಬೇಕಾದರೆ ಎರಡು ಗಂಟೆ ಕ್ಯೂ, ಒಳ ಬಂದ ಮೇಲೆ ಬಿಲ್ಲಿಂಗ್‌ಗೆ ಅರ್ಧ ಮುಕ್ಕಾಲು ಗಂಟೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ’’ ಎಂದು ತಮ್ಮ ಜತೆಗಿದ್ದ ಮಹಿಳೆಯೊಬ್ಬರ ಜತೆ ಅಸಹನೆ ವ್ಯಕ್ತಪಡಿಸಿದರು.

ಬಿಸಿಲಲ್ಲೇ ಕ್ಯೂನಲ್ಲಿ ನಿಂತರು

ನಗರದ ಬಹುತೇಕ ಸೂಪರ್ ಮಾರುಕಟ್ಟೆ, ಅಂಗಡಿಗಳಲ್ಲಿ ಬೆಳಗ್ಗೆ ಸುಮಾರು 10 ಗಂಟೆಯಿಂದ 3 ಗಂಟೆಯವರೆಗೆ ಗ್ರಾಹಕರು ಗಂಟೆಗಟ್ಟಲೆ ಉರಿ ಬಿಸಿಲಿನಲ್ಲೇ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ. 3 ಗಂಟೆಯ ಬಳಿಕವೂ ಬಹುತೇಕ ಅಂಗಡಿಗಳೆದುರು ಜನರು ಕ್ಯೂನಲ್ಲಿ ದಿನಬಳಕೆಯ ಸಾಮಗ್ರಿ ಖರೀದಿಗೆ ಹತಾಷರಾಗಿ ನಿಂತಿದ್ದರು. ಸೂಪರ್ ಮಾರುಕಟ್ಟೆಗಳಲ್ಲಿ 2.45ರ ಹೊತ್ತಿಗೇ ಬಾಗಿಲು ಬಂದ್ ಮಾಡಿದ್ದರೂ (ಒಳ ಹೋದವರು ಖರೀದಿಯಲ್ಲಿ ತೊಡಗಿದ್ದರು) ಹೊರಗೆ ಕ್ಯೂನಲ್ಲಿ ನಿಂತವರು ಒಳಗೆ ಖರೀದಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿರುವ ದೃಶ್ಯ ಮನಕರಗಿಸುವಂತಿತ್ತು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News