ಉಪ್ಪಿನಂಗಡಿ: ಸಡಿಲಗೊಂಡ ಲಾಕ್‍ಡೌನ್; ಖರೀದಿಗೆ ಮುಗಿಬಿದ್ದ ಜನತೆ

Update: 2020-03-31 09:29 GMT

ಉಪ್ಪಿನಂಗಡಿ: ಕೊರೋನ ವೈರಸ್‍ನ ಹರಡುವಿಕೆ ತಡೆಗಟ್ಟಲು ದ.ಕ. ಜಿಲ್ಲೆಯಲ್ಲಿ ವಿಧಿಸಿದ್ದ ಕಟ್ಟುನಿಟ್ಟಿನ ಲಾಕ್‍ಡೌನನ್ನು ಮಂಗಳವಾರ ಸಡಿಲಿಸಿದ್ದು, ಉಪ್ಪಿನಂಗಡಿ ಪೇಟೆಯಲ್ಲಿ ಜನ ಜಾತ್ರೆಯೇ ಕಂಡು ಬಂತು. ಪೊಲೀಸರು, ಅಧಿಕಾರಿಗಳು ಜನರನ್ನು, ವಾಹನಗಳನ್ನು ನಿಯಂತ್ರಿಸುವುದರಲ್ಲೇ ಹೈರಾಣಾದರು.

ಕಟ್ಟುನಿಟ್ಟಿನ ಲಾಕ್‍ಡೌನ್‍ಅನ್ನು ಮಾ.31ರಂದು ಬೆಳಗ್ಗೆ 6ರಿಂದ 3ರವರೆಗೆ ಅಗತ್ಯ ಸಾಮಗ್ರಿ ಖರೀದಿಗಾಗಿ ಸಡಿಲಿಸಿದ್ದು, ಬೆಳಗ್ಗೆ ವರ್ತಕರು ಅಂಗಡಿ ಬಾಗಿಲು ತೆರೆಯುವ ಮೊದಲೇ ಜನರು ಅಂಗಡಿಯ ಮುಂದೆ ಮುಗಿ ಬಿದ್ದಿದ್ದರು. ಬಳಿಕವೂ ಜನ ಜಂಗುಳಿ ಹೆಚ್ಚುತ್ತಲೇ ಹೋಗಿದ್ದು, ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಳಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು.

ಪ್ರತಿಯೋರ್ವರು ಮಾಸ್ಕ್ ಹಾಕಿಕೊಂಡು ಬರಬೇಕು. ಅಂಗಡಿಗಳ ಮುಂದೆ ಅಂತರ ಕಾಯ್ದುಕೊಂಡು ನಿಲ್ಲಬೇಕು ಎಂಬ ಸೂಚನೆಯನ್ನೇ ಜನ ಧಿಕ್ಕರಿಸಿದಂತಿತ್ತು. ತನಗೆಲ್ಲಿ ಸಾಮಗ್ರಿ ಸಿಗಲ್ವೋ ಎಂಬ ಭೀತಿಯಿಂದ ನೂಕು ನುಗ್ಗಲು ಅಂಗಡಿಗಳ ಮುಂದೆ ಕಂಡು ಬಂತು.

ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಿ, ಅಲ್ಲಿನವರಿಗೆ ಬೇಕಾದ ದಿನ ನಿತ್ಯದ ಸಾಮಗ್ರಿಗಳನ್ನು ಮನೆ, ಮನೆಗೆ ತಲುಪಿಸುವ ಉತ್ತಮ ಯೋಜನೆಯನ್ನು ಉಪ್ಪಿನಂಗಡಿ ಗ್ರಾ.ಪಂ. ಹಾಕಿಕೊಂಡಿತ್ತು. ಆದರೆ ಇಂದು ಎಲ್ಲರಿಗೂ ಅತ್ಯವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟಿದ್ದರಿಂದ ಇತರ ಹಳ್ಳಿಗಳವರು ಉಪ್ಪಿನಂಗಡಿ ಪೇಟೆಗೆ ಆಗಮಿಸಿದ್ದು, ಉಪ್ಪಿನಂಗಡಿ ಗ್ರಾ.ಪಂ. ಜನರೂ ಸಾಮಗ್ರಿ ಖರೀದಿಗೆ ಆಗಮಿಸಿದ್ದರು. ಇದರಿಂದ ಜನಜಂಗುಳಿ ಉಂಟಾಗಿ ಎಲ್ಲಾ ಏರುಪೇರಾಯಿತು. ಇದನ್ನು ಮನಗಂಡ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷರಾದಿಯಾಗಿ, ಸದಸ್ಯರು, ಸಿಬ್ಬಂದಿ ಫೀಲ್ಡ್‍ಗಿಳಿದು ಜನರಿಗೆ ನಿಯಮ ಪಾಲಿಸುವಂತೆ ಧ್ವನಿವರ್ಧಕದ ಮೂಲಕ ಮನವಿ ಮಾಡಿದರಲ್ಲದೆ, ಗ್ರಾ.ಪಂ. ಈ ಮೊದಲೇ ತಿಳಿಸಿದ ಸಾಮಗ್ರಿಗಳನ್ನು ಮಾತ್ರ ವರ್ತಕರು ನೀಡಬೇಕೆಂದು ಸೂಚನೆ ನೀಡಿದರು.

ಅಧಿಕಾರಿಗಳಿಂದ ಅವಲೋಕನ: ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಸುನೀಲ್, ಗ್ರಾಮ ಕರಣಿಕ ಸುನೀಲ್ ಉಪ್ಪಿನಂಗಡಿಯಲ್ಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದರು.

ಗ್ರಾಹಕರ ಸಂಖ್ಯೆ ಹೆಚ್ಚಿದ್ದುದರಿಂದ ಅಂಗಡಿಗಳಲ್ಲಿ ಕೊನೆ ಕೊನೆಗೆ ಸಾಮಗ್ರಿಗಳ ಕೊರತೆ ಕಂಡು ಬಂತು. ತರಕಾರಿ ಅಂಗಡಿಗಳಲ್ಲಿ ಬಾಡಿದ್ದ ತರಕಾರಿಗಳೇ ಹೆಚ್ಚಿತ್ತು. ಯಾವಾಗಲೂ ಉತ್ತಮವಾಗಿರುವುದನ್ನೇ ಆರಿಸಿ ಕೊಂಡು ಹೋಗುತ್ತಿದ್ದ ಜನರು ಇಂದು ಮಾತ್ರ ಬಾಡಿ ಹೋಗಿದ್ದ ತರಕಾರಿಗಳನ್ನು ಕೂಡಾ ಜನರು ನೋಡದೇ ತೆಗೆದುಕೊಂಡು ಹೋಗುತ್ತಿದ್ದರು. ಆದ್ದರಿಂದ ತರಕಾರಿ, ಹಣ್ಣುಹಂಪಲುಗಳು ಖಾಲಿಯಾಗುವಂತಾಗಿತ್ತು.

ಠುಸ್ಸಾಯಿತೇ `ಲಾಕ್‍ಡೌನ್' ?

ದ.ಕ. ಜಿಲ್ಲೆಯಲ್ಲಿ ಈ ಮೊದಲು ಬೆಳಗ್ಗೆ 6ರಿಂದ 11ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. 11ರವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಿದ್ದಾಗ ಜನರು ಈ ಪರಿಯಾಗಿ ಬೀದಿಗಿಳಿಯುತ್ತಿರಲಿಲ್ಲ. ರಸ್ತೆಯಿಡೀ ಬಿಕೋ ಅನ್ನುತ್ತಿತ್ತು. ಅನಗತ್ಯ ತಿರುಗಾಡುವರನ್ನು ನಿಯಂತ್ರಿಸಲು ಪೊಲೀಸರಿಗೂ ಸುಲಭ ಸಾಧ್ಯವಾಗಿತ್ತು. 

ಆದರೆ ಬಳಿಕ ಲಾಕ್‍ಡೌನ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಿ, ಸಂಪೂರ್ಣ ಮೆಡಿಕಲ್, ಹಾಲು ಹೊರತು ಪಡಿಸಿ ಇತರೆ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಯಿತು. ಮೆಡಿಕಲ್‍ಗಳು ಬಾಗಿಲು ತೆರೆದಿದ್ದವಾದರೂ, ಸರಿಯಾಗಿ ಹಾಲಿನ ಪೂರೈಕೆ ಆಗದ್ದರಿಂದ ಹಾಗೂ ಕೆಲವು ಹಾಲಿನಂಗಡಿಯವರು ಬಾಗಿಲು ತೆರೆಯದಿದ್ದದ್ದರಿಂದ ಹಾಲಿನ ಪೂರೈಕೆಯಲ್ಲೂ ವ್ಯತ್ಯಯ ಕಂಡು ಬಂದಿತ್ತು. ಮಾ.31ರಂದು  ಲಾಕ್‍ಡೌನ್ ಸಡಿಲಿಸಿ ಜನರಿಗೆ ಸಂಜೆ 3ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ್ದು, ಇನ್ನು ಮುಂದೆಯೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಬಹುದು ಎಂಬ ಭೀತಿಯಿಂದ ಎಲ್ಲೆಡೆಯೂ ನೂಕು ನುಗ್ಗಲು, ಜನಜಾತ್ರೆಯೇ ಕಂಡು ಬಂತು. ಇದರಿಂದ ಈವರೆಗಿನ ಲಾಕ್‍ಡೌನ್ ಒಂದೇ ದಿನದಲ್ಲಿ ಠುಸ್ಸಾದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News