ಕೊರೋನ ಸೋಂಕಿತರ ಮೃತದೇಹ ಸುಡುವ ಆದೇಶ ಹಿಂಪಡೆದ ಮುಂಬೈ ಪಾಲಿಕೆ

Update: 2020-03-31 10:29 GMT

ಮುಂಬೈ, ಮಾ. 31: "ಮುಂಬೈಯಲ್ಲಿ ಕೊರೋನ ವೈರಸ್ ನಿಂದ ಮೃತಪಟ್ಟರೆ ಯಾವುದೇ ಧರ್ಮದ ವ್ಯಕ್ತಿಯಾದರೂ ಮೃತದೇಹವನ್ನು ಸುಡಬೇಕು, ಹೂಳಲು ಅವಕಾಶ ಇಲ್ಲ" ಎಂದು ತಾನು ನೀಡಿದ್ದ ಆದೇಶವನ್ನು ಬ್ರಹನ್ ಮುಂಬೈ ಕಾರ್ಪೊರೇಷನ್ ( ಬಿಎಂಸಿ) ಹಿಂದೆಗೆದುಕೊಂಡಿದೆ.

ಹೊಸ ಆದೇಶದ ಪ್ರಕಾರ ಯಾರಾದರೂ ಕೊರೋನದಿಂದ ಮೃತಪಟ್ಟವರ ಪಾರ್ಥಿವ ಶರೀರವನ್ನು ಹೂಳಲು ಬಯಸಿದರೆ ಅಂತಹ ಬಂಧುಗಳು ಮತ್ತು ಅವರ ಜನರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪೊಲೀಸ್ ಉಪಸ್ಥಿತಿಯಲ್ಲೇ ಅದನ್ನು ಮಾಡಬೇಕು . ಈ ಷರತ್ತನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಆದೇಶ ಹೇಳಿದೆ.

ಅಂತಿಮ ಸಂಸ್ಕಾರದಲ್ಲಿ ಕೇವಲ ಐದು ಮಂದಿ ಮಾತ್ರ ಭಾಗವಹಿಸಬೇಕು ಮತ್ತು ಮೃತದೇಹವನ್ನು ಮುಟ್ಟುವ ಯಾವುದೇ ವಿಧಿವಿಧಾನಗಳನ್ನು ಪಾಲಿಸಬಾರದು ಎಂದೂ ಆದೇಶದಲ್ಲಿ ಹೇಳಲಾಗಿದೆ.

ಸೋಮವಾರ ಬಿಎಂಸಿ ಆಯುಕ್ತ ಪ್ರವೀಣ್ ಪರದೇಶಿ ಅವರು ಕೊರೊನ ಸೋಂಕಿತರ ಮೃತದೇಹವನ್ನು ಸುಡುವ ಆದೇಶ ಹೊರಡಿಸಿದ್ದರು. ಅದರ ಬೆನ್ನಿಗೆ ಟ್ವೀಟ್ ಮಾಡಿದ ಸಚಿವ ನವಾಬ್ ಮಲಿಕ್ ಅವರು ಈ ಬಗ್ಗೆ ಆಯುಕ್ತರಲ್ಲಿ ಚರ್ಚಿಸಿದ್ದೇವೆ. ಈಗ ಆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.

ದಿಲ್ಲಿಯ ಏಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್ ಗುಪ್ತಾ ಅವರು ಹೇಳಿಕೆ ನೀಡಿ ಕೊರೋನದಿಂದ ಮೃತಪಟ್ಟವರ ಶರೀರವನ್ನು ಸುಡುವುದು, ಹೂಳುವುದು ಅಥವಾ ವಿದ್ಯುತ್ ಚಿತಾಗಾರದಲ್ಲಿ ಸುಡುವುದು ಹೀಗೆ ಯಾವುದೇ ರೀತಿಯಲ್ಲಿ ಅಂತಿಮ ಸಂಸ್ಕಾರ ಮಾಡಿದರೂ ಅದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News