ಕೋವಿಡ್-19 ನಿಂದ ಅಭಿವೃದ್ಧಿಶೀಲ ದೇಶಗಳಲ್ಲಿ ಆರ್ಥಿಕ ಹಿಂಜರಿತ: ಭಾರತ, ಚೀನಾಕ್ಕೆ ಸಮಸ್ಯೆಯಿಲ್ಲ

Update: 2020-03-31 14:46 GMT

ವಿಶ್ವಸಂಸ್ಥೆ, ಮಾ. 31: ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಜಾಗತಿಕ ಆದಾಯದಲ್ಲಿ ಟ್ರಿಲಿಯಗಟ್ಟಳೆ ಡಾಲರ್ ನಷ್ಟವಾಗಲಿದ್ದು, ಈ ವರ್ಷ ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತ ಉಂಟಾಗಲಿದೆ ಎಂದು ವಿಶ್ವಸಂಸ್ಥೆಯ ನೂತನ ವ್ಯಾಪಾರ ವರದಿ ಹೇಳಿದೆ.

ಈ ಬೆಳವಣಿಗೆಯು ಅಭಿವೃದ್ಧಿಶೀಲ ದೇಶಗಳಿಗೆ ತೀವ್ರ ಹೊಡೆತವನ್ನು ನೀಡಲಿದೆಯಾದರೂ, ಭಾರತ ಮತ್ತು ಚೀನಾ ದೇಶಗಳು ಈ ಹೊಡೆತವನ್ನು ತಪ್ಪಿಸಿಕೊಳ್ಳಲಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗ ಅಭಿವೃದ್ಧಿಶೀಲ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಹಾಗೂ ಕೋವಿಡ್-19 ಸಾಂಕ್ರಾಮಿಕದ ಹೊಡೆತದಿಂದಾಗಿ ಅಭಿವೃದ್ಧಿಶೀಲ ದೇಶಗಳು ಅಭೂತಪೂರ್ವ ಆರ್ಥಿಕ ಸಂಕಷ್ಟವನ್ನು ಎದುರಿಸಲಿವೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (ಅಂಕ್ಟಡ್)ನ ನೂತನ ವಿಶ್ಲೇಷಣೆ ಹೇಳಿದೆ. ಈ ದೇಶಗಳಿಗೆ 2.5 ಟ್ರಿಲಿಯನ್ ಡಾಲರ್ (ಸುಮಾರು 188 ಲಕ್ಷ ಕೋಟಿ ರೂಪಾಯಿ) ರಕ್ಷಣಾ ಪ್ಯಾಕೇಜ್‌ನ ಅವಶ್ಯಕತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಆದರೆ, ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ, ಭಾರತ ಮತ್ತು ಚೀನಾಗಳಿಗೆ ಅದರ ಬಿಸಿ ಯಾಕೆ ತಟ್ಟುವುದಿಲ್ಲ ಎಂಬ ಬಗ್ಗೆ ವರದಿಯು ಹೆಚ್ಚಿನ ವಿವರಣೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News