94 ಶೇ.ದಷ್ಟು 65 ವರ್ಷಕ್ಕಿಂತ ಕೆಳಗಿನವರು ಇರುವ ಭಾರತದಲ್ಲಿ ಲಾಕ್‍ ಡೌನ್‍ ಅರ್ಥಹೀನ

Update: 2020-03-31 16:43 GMT

ಹೊಸದಿಲ್ಲಿ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 94ರಷ್ಟು ಮಂದಿ 65 ವರ್ಷಕ್ಕಿಂತ ಕಡಿಮೆ ಪ್ರಾಯದವರು. ಇಂತಹ ದೇಶಗಳಲ್ಲಿ ಲಾಕ್‍ ಡೌನ್ ಘೋಷಿಸುವುದು ಅರ್ಥಹೀನ ಎಂದು ಬಜಾಜ್‍ ಆಟೊ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್‍ ಅಭಿಪ್ರಾಯಪಟ್ಟಿದ್ದಾರೆ.

thewire.inಗೆ ನೀಡಿದ ಇ-ಮೇಲ್ ಸಂದರ್ಶನದಲ್ಲಿ, “ಹಿರಿಯ ನಾಗರಿಕರಿಗೆ ಕೊರೋನ ಸೋಂಕು ಹರಡುವ ಸಾಧ್ಯತೆ ಅಧಿಕ. ಆದ್ದರಿಂದ ಶೇಕಡ 94ರಷ್ಟು ಮಂದಿ 65 ವರ್ಷಕ್ಕಿಂತ ಕೆಳಗಿನವರು ಇರುವ ದೇಶದಲ್ಲಿ ಲಾಕ್‍ ಡೌನ್ ಜಾರಿಗೊಳಿಸುವುದು ವಿವೇಕಯುತ ಎಂದು ಅನಿಸುವುದಿಲ್ಲ. ಅವರನ್ನು ಮನೆಯಲ್ಲೇ ಉಳಿಸಿ, ಸಾರ್ವಜನಿಕ ಸ್ಥಳಗಳನ್ನು ಮುಚ್ಚಿ, ಉಳಿದಂತೆ ಜನಜೀವನ ಸಾಮಾನ್ಯವಾಗಿ ನಡೆಯಲು ಅವಕಾಶ ನೀಡಬೇಕು" ಎಂದು ಹೇಳಿದರು.

ಲಾಕ್‍ ಡೌನ್‍ ಅವಧಿ ಮುಗಿದ ಬಳಿಕ ಬೇಡಿಕೆ ಹೆಚ್ಚುವ ಪ್ರಕ್ರಿಯೆ ಕೂಡಾ ನಿಧಾನವಾಗಲಿದೆ. ಪುನಶ್ಚೇತನ ಕಷ್ಟಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಇತರ ದ್ವಿಚಕ್ರ ವಾಹನ ಕಂಪನಿಗಳಂತೆ ಬಜಾಜ್‍ ಕೂಡಾ ತನ್ನ ಎಲ್ಲ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ.

ಸಣ್ಣ ಉದ್ದಿಮೆಗಳು ಬಹಳಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಿದ್ದು, ಈ ಹೊಡೆತದಿಂದ ಇಂತಹ ಉದ್ಯಮಗಳು ಚೇತರಿಸಿಕೊಳ್ಳುವುದು ಕಷ್ಟ. ದೊಡ್ಡ ಕಂಪನಿಗಳು ಸದ್ಯಕ್ಕೆ ತಡೆದುಕೊಳ್ಳಬಹುದು. ವಿವೇಕಯುತ ನಿರ್ಧಾರವೆಂದರೆ ಸಾಧ್ಯವಾದಷ್ಟು ಬೇಗ ಲಾಕ್‍ ಡೌನ್ ಅಂತ್ಯಗೊಳಿಸುವುದು ಎಂದುಅವರು ಹೇಳಿದ್ದಾರೆ.

ಸಂಕಷ್ಟದಲ್ಲಿರುವ ಡೀಲರ್‍ ಗಳು, ಬಿಡಿಭಾಗಗಳ ಪೂರೈಕೆದಾರರು ಮತ್ತು ವಿತರಣಾ ವ್ಯವಸ್ಥೆ ಸುಧಾರಣೆಗೆ ಏನು ಕ್ರಮಗಳನ್ನು ಕಂಪನಿ ಕೈಗೊಳ್ಳಲಿದೆ ಎಂದು ಪ್ರಶ್ನಿಸಿದಾಗ, “ನಾವು ಸಾಧ್ಯವಿರುವ ಒಂದಷ್ಟು ನೆರವು ನೀಡಬಹುದು; ಡೀಲರ್‍ ಗಳಿಗೆ ಬಡ್ಡಿರಹಿತ ಸಾಲ ಮತ್ತು ವಿತರಕರಿಗೆ ಪಾವತಿಗಳನ್ನು ತಕ್ಷಣ ಮಾಡಬಹುದು. ಇದು ನಮ್ಮಯೋಜನೆ" ಎಂದು ವಿವರಿಸಿದ್ದಾರೆ.

ದಿಢೀರ್ ಲಾಕ್‍ ಡೌನ್‍ ಘೋಷಣೆಯಿಂದ ರಫ್ತು ಉದ್ಯಮ ಕೂಡಾ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News