ಉಡುಪಿ ನಗರದಲ್ಲಿ ಹೆಚ್ಚಿದ ಜನ, ವಾಹನ ಸಂಚಾರ

Update: 2020-03-31 17:40 GMT

ಉಡುಪಿ, ಮಾ.31: ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿನಸಿ ಹಾಗೂ ತರಕಾರಿ ಖರೀದಿಗೆ ಸಮಯ ನಿಗದಿ ಪಡಿಸಿದ ಪರಿಣಾಮ ಮಂಗಳವಾರ ಬೆಳಗ್ಗೆ 11 ಗಂಟೆಯವರೆಗೆ ಉಡುಪಿ ನಗರದಲ್ಲಿ ವಾಹನ ಹಾಗೂ ಜನ ಸಂಚಾರ ಅಧಿಕ ವಾಗಿತ್ತು.

ಬೆಳಗ್ಗೆ 7ಗಂಟೆಯಿಂದ ಪೂರ್ವಾಹ್ನ 11ಗಂಟೆಯ ಮಧ್ಯೆ ನಗರದ ಬಿಗ್ ಬಜಾರ್, ಸೂಪರ್‌ಮಾರ್ಕೆಟ್, ದಿನಸಿ ಅಂಗಡಿಗಳು ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ನಗರದ ಕೆ.ಎಂ.ಮಾರ್ಗ, ಉಡುಪಿ -ಮಣಿಪಾಲ ರಸ್ತೆಯಲ್ಲಿ ಹೆಚ್ಚಿನ ವಾಹನಗಳ ಓಡಾಟಗಳಿದ್ದವು. ಎಲ್ಲ ಬ್ಯಾಂಕ್‌ಗಳು ಕಾರ್ಯಾಚರಿಸುತ್ತಿರುವುದರಿಂದ ಗ್ರಾಹಕರು ಕೂಡ ಅಗತ್ಯ ಕೆಲಸಗಳಿಗಾಗಿ ಬ್ಯಾಂಕ್‌ಗಳಿಗೆ ಧಾವಿಸಿ ಬರುತ್ತಿದ್ದರು. ಸಣ್ಣ ಸಣ್ಣ ಮೆಡಿಕಲ್ ಶಾಪ್‌ಗಳಲ್ಲಿ ಔಷಧಿಗಳ ಕೊರತೆ ಇರುವುದರಿಂದ ಬಹುತೇಕರು ದೊಡ್ಡ ಮೆಡಿಕಲ್ ಶಾಪ್‌ಗಳಲ್ಲಿಯೇ ಔಷಧಿಗಳನ್ನು ಖರೀದಿಸುತ್ತಿದ್ದರು. ಔಷಧಿಗಳ ಖರೀದಿಗೆ ಉದ್ದನೆಯ ಸರದಿ ಸಾಲುಗಳು ಕಂಡುಬಂದವು.

ಕೆಲವು ಕಡೆ ಸಾಮಾಜಿಕ ಅಂತರ ಪಾಲಿಸಿದರೆ, ಇನ್ನು ಕೆಲವು ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ನಿರ್ಲಕ್ಷಿಸುತ್ತಿರುವುದು ಕಂಡುಬಂತು. ಬೆಳಗ್ಗೆ 11 ಗಂಟೆಯ ನಂತರ ಜನ ಹಾಗೂ ವಾಹನ ಸಂಚಾರ ನಗರದಲ್ಲಿ ಕಡಿಮೆ ಇತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ತೆರೆದಿದ್ದ ದಿನಸಿ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿರುವುದು ತಿಳಿದುಬಂದಿದೆ.

ಶಿರ್ವ, ಕಾಪು, ಬ್ರಹ್ಮಾವರ ಸೇರಿದಂತೆ ಕಡೆಗಳಲ್ಲಿ ಜನರಿಗೆ ಬೇಕಾಗುವ ಕೆಲವು ಅಗತ್ಯ ಔಷಧಿಗಳ ಕೊರತೆ ಉಂಟಾಗಿದ್ದು, ಸ್ಟಾಕ್ ಇಲ್ಲದ ಕಾರಣ ಕೆಲವು ವಿತರಕರು ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಅಗತ್ಯ ಔಷಧಿಗಳಿಗೆ ಉಡುಪಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯಾದ್ಯಂತ ಮೀನು ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದು ಕೋಳಿ ಮಾಂಸದ ಅಂಗಡಿಗಳು ಬೆಳಿಗ್ಗೆ ತೆರೆದಿದ್ದವು. ಪೆಟ್ರೋಲ್ ಪಂಪ್‌ಗಳು ಎಂದಿನಂತೆ ಕಾರ್ಯಚರಿಸಿದವು. ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News