ತಬ್ಲೀಗಿ ಜಮಾಅತ್ ವಿರುದ್ಧ ಸರಕಾರದಿಂದ ನಿರಾಧಾರ ಆರೋಪ: ಯುನಿವೆಫ್ ಖಂಡನೆ

Update: 2020-04-01 04:21 GMT

ಮಂಗಳೂರು, ಎ.1: ಇತ್ತೀಚೆಗೆ ಭಾರತದಾದ್ಯಂತ ಕೇಂದ್ರ ಸರಕಾರವು ಯಾವುದೇ ಮುನ್ಸೂಚನೆ ನೀಡದೆ ಲಾಕ್ ಡೌನ್ ಘೋಷಣೆ ಮಾಡಿದಾಗ ದಿಲ್ಲಿಯ ತಬ್ಲೀಗಿ ಜಮಾಅತ್ ನ ಕೇಂದ್ರ ನಿಝಾಮುದ್ದೀನ್ ನಲ್ಲಿ ಸಾವಿರಾರು ಮಂದಿ ಸಿಲುಕಿಕೊಂಡಿದ್ದರು. ಕೆಲವರು ತಮ್ಮ ವಾಹನಗಳಲ್ಲಿ ಹಿಂದಿರುಗಿದರೂ, ಸಾರ್ವಜನಿಕ ವಾಹನ ಸಂಚಾರ ಹಠಾತ್ ನಿಲುಗಡೆಯ ಕಾರಣ ನೂರಾರು ಮಂದಿಗೆ ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗಲಿಲ್ಲ ಎಂಬುದಾಗಿ ತಬ್ಲೀಗಿ ಜಮಾಅತ್ ನ ಪ್ರಮುಖರ ಸ್ಪಷ್ಟೀಕರಣದ ಬಳಿಕವೂ, ಲಾಕ್ ಡೌನ್ ನ ಕಾರಣದಿಂದ ಉಂಟಾಗಿರುವ ಗೊಂದಲವನ್ನು ಹಾಗೂ ಜನರ ಸಮಸ್ಯೆಗಳನ್ನು ಬೇರೆಡೆಗೆ ತಿರುಗಿಸಲು, ಕೊರೋನ ವೈರಸ್ಸನ್ನು ಈ ಕೇಂದ್ರದಲ್ಲಿರುವವರು ಇತರರಿಗೆ ಪಸರಿಸುತ್ತಿದ್ದಾರೆ ಎಂಬ ಆರೋಪ ಅತ್ಯಂತ ಖೇದಕರ ಎಂದು ಯುನಿವೆಫ್ ಕರ್ನಾಟಕ ಹೇಳಿದೆ.

ಇತರ ಪೂಜಾ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರನ್ನು ಸಿಲುಕಿರುವವರು ಎಂದೂ ನಿಝಾಮುದ್ದೀನ್ ನಲ್ಲಿ ಉಳಿದಿರುವವರನ್ನು ಅಡಗಿಕೊಂಡಿರುವವರು ಎಂದೂ ಬಿತ್ತರಿಸುವ ಮಾಧ್ಯಮಗಳು ದ್ವಿಮುಖ ಧೋರಣೆಯನ್ನು ತೋರುತ್ತಿವೆ. ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಆರೋಗ್ಯವನ್ನೂ ಮತ್ತು ದೇಶವಾಸಿಗಳನ್ನೂ ಸಂರಕ್ಷಿಸಬೇಕಾದ ಸಂದರ್ಭದಲ್ಲಿ ಕೋಮು ಧ್ರುವೀಕರಣದ ಮೂಲಕ ಸಮಸ್ಯೆಯನ್ನು ಜಟಿಲಗೊಳಿಸುತ್ತಿರುವುದು ಖಂಡನೀಯ. ಈ ದೇಶದಲ್ಲಿ ಸರ್ವರಿಗೂ ಏಕರೂಪದ ನ್ಯಾಯ ಒದಗಿಸಬೇಕೆಂದು ಯುನಿವೆಫ್ ಕರ್ನಾಟಕ ಪ್ರಕಟನೆಯಲ್ಲಿ ಒತ್ತಾಯಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News