ಸವಣೂರು: ನಿಯಮ ಪಾಲಿಸದ ಆರೋಪ; ಹೋಂ ಕ್ವಾರಂಟೈನ್‌ನಲ್ಲಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು

Update: 2020-04-01 07:40 GMT

ಸುಳ್ಯ, ಎ.1: ನಿಯಮಗಳನ್ನು ಪಾಲಿಸದೆ ಊರು ಸುತ್ತುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಹೋಂ ಕ್ವಾರಂಟೈನ್‌ನಲ್ಲಿದ್ದ ಸವಣೂರು ಮೂಲದ ಯುವಕನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ವಿಚಾರಣೆಗೆ ಮನೆಗೆ ತೆರಳಿದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತಂತೆ ಎರಡು ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಸವಣೂರು ಗ್ರಾಮದ ಅರೆಲ್ತಡಿ ನಿವಾಸಿ ಮುಹಮ್ಮದ್ ಹನೀಫ್ ಎಂಬಾತ ಮಾ.22ರಂದು ಮುಂಬೈಯಿಂದ ಊರಿಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಆತನ ಮನೆಗೆ ತೆರಳಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರುವ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಾ.30 ಇಲಾಖೆಯವರು ಹನೀಫ್ ಮನೆಗೆ ಭೇಟಿಗೆ ಹೋದಾಗ ಆತ ಮನೆಯಲ್ಲಿರದೇ ಎಲ್ಲೋ ಸುತ್ತಾಡಲು ಹೋಗಿದ್ದನೆನ್ನಲಾಗಿದ್ದು, ಸುಮಾರು 1 ಗಂಟೆಯ ಬಳಿಕ ಮನೆಗೆ ಬಂದನೆನ್ನಲಾಗಿದೆ. ಈ ಕುರಿತು ಪ್ರಶ್ನಿಸಿದ ಸರಕಾರಿ ಅಧಿಕಾರಿಗಳಾದ ಆರೋಗ್ಯ ಇಲಾಖೆಯ ವಾಗೇಶ್ವರಿ ಹಾಗೂ ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒರನ್ನು ಗದರಿಸಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ದೂರಲಾಗಿದೆ.

ಆರೋಪಿಯು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕೋವಿಡ್-19 ಕೊರೋನ ವೈರಸ್ ಸೋಂಕು ರೋಗ ಹರಡುವುದನ್ನು ನಿಯಂತ್ರಿಸುವ ಸರಕಾರದ ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ್ದಾನೆ ಹಾಗೂ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ವಾಗೇಶ್ವರಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 353, 259 ಹಾಗೂ 270ರಡಿ ಪ್ರಕರಣ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News