ದ.ಕ. ಜಿಲ್ಲೆಯಲ್ಲಿ ಕೊಂಚ ನಿರಾಳರಾದ ಜನತೆ

Update: 2020-04-01 08:07 GMT

ಮಂಗಳೂರು, ಎ.1: ದ.ಕ. ಜಿಲ್ಲಾದ್ಯಂತ ಇಂದಿನಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ದಿನಬಳಕೆಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶದ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಜನತೆಯಲ್ಲಿ ನಿರಾಳತೆ ಕಂಡು ಬಂದಿದೆ. 

ನಿನ್ನೆ ನಗರದ ಮಾರುಕಟ್ಟೆ, ಅಂಗಡಿ, ಸೂಪರ್ ಮಾರುಕಟ್ಟೆಗಳಲ್ಲಿ ಖರೀದಿಗಾಗಿ ಕಂಡುಬಂದ ಜನಜಂಗುಳಿ ಇಂದು ಇಲ್ಲವಾಗಿದೆ. ಜನರು ಆರಾಮವಾಗಿ ಖರೀದಿ ಕಾರ್ಯ ನಡೆಸಿದರು. ಅಂಗಡಿ, ಮಾರುಕಟ್ಟೆಗಳಲ್ಲಿ ಇಂದು ಆಹಾರ ಸಾಮಗ್ರಿಗಳ ಸಂಗ್ರಹ ಮಾಡಲಾಗಿದೆಯಾದರೂ ಸಾಕಷ್ಟು ಪ್ರಮಾಣದಲ್ಲಿ ಇನ್ನಷ್ಟೇ ದಾಸ್ತಾನು ಬರಬೇಕಿದೆ. ತರಕಾರಿ, ಹಣ್ಣುಹಂಪಲುಗಳ ಮಾರಾಟ ನಗರದ ಕೆಲವು ಒಳ ರಸ್ತೆಗಳು, ಬೀದಿ ಬದಿಗಳಲ್ಲಿ ಮಾರಾಟ ಮಾಡುವ ದೃಶ್ಯಗಳು ಕಂಡು ಬರುತ್ತಿವೆ.

ನಗರದ ಸೂಪರ್ ಮಾರುಕಟ್ಟೆಗಳಲ್ಲೂ ಜನರ ಸರತಿ ಸಾಲು ಅತ್ಯಂತ ವಿರಳವಾಗಿತ್ತು. ಹೈವೇ ಹಾಗೂ ರಸ್ತೆಗಳಲ್ಲಿ ಖಾಸಗಿ ವಾಹನಗಳು ಹಾಗೂ ಸರಕು ಸಾಗಾಟದ ವಾಹನಗಳ ಸಂಚಾರ 12ರವರೆಗೆ ಸರಾಗವಾಗಿತ್ತು (ವಾಹನಗಳ ದಟ್ಟನೆ ಕಂಡು ಬಂದಿಲ್ಲ).

ಮೆಡಿಕಲ್‌ಗಳಲ್ಲಿ ತಪ್ಪದ ಕ್ಯೂ!

ನಗರದ ಪ್ರಮುಖ ಮೆಡಿಕಲ್‌ಗಳಲ್ಲಿ ಇಂದು ಕೂಡಾ ಬೆಳಗ್ಗಿನ ಹೊತ್ತು ಜನರು ಸರತಿ ಸಾಲಿನಲ್ಲಿ ಔಷಧಿಗಳ ಖರೀದಿ ನಡೆಸಿದರು.

ಸೆಂಟ್ರಲ್ ಮಾರುಕಟ್ಟೆಯಲ್ಲಿ ಪೊಲೀಸ್ ಪಹರೆ ಮತ್ತಷ್ಟು ಬಿಗಿ

 ಸೆಂಟ್ರಲ್ ಮಾರುಕಟ್ಟೆಯಲ್ಲಿ ಇಂದಿನಿಂದ ಸಾರ್ವಜನಿಕರಿಗೆ ಖರೀದಿಗೆ ಸಂಪೂರ್ಣ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಮಾತ್ರವಲದೆ, ಸೆಂಟ್ರಲ್ ಮಾರುಕಟ್ಟೆಯಲ್ಲಿ ಹೋಲ್‌ಸೇಲ್ ವ್ಯಾಪಾರಸ್ಥರು ಮಾತ್ರವೇ ರಾತ್ರಿ 11ರಿಂದ ಮುಂಜಾನೆ 4್ಜವರೆಗೆ ವ್ಯವಹರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಹಾಗಾಗಿ ಇಂದು ಬೆಳಗ್ಗಿನಿಂದಲೇ ಸೆಂಟ್ರಲ್ ಮಾರುಕಟ್ಟೆ ಬಂದ್ ಆಗಿದ್ದು, ಸುತ್ತಮುತ್ತ ಪೊಲೀಸ್ ಪಹರೆಯನ್ನು ಬಿಗಿಗೊಳಿಸಲಾಗಿದೆ. ಇದೇ ವೇಳೆ ಪ್ರತಿದಿನ ದಿನಸಿ, ತರಕಾರಿ ಹಾಗೂಹಣ್ಣು ಹಂಪಲುಗಳ ಅಂಗಡಿಗಳು ಬೆಳಗ್ಗೆ 7ರಿಂದ ಮಧ್ಯಾಹ್ನ 12ರಿಂದ ತೆರೆದಿರುವುದಾಗಿ ಜಿಲ್ಲಾಡಳಿತ ಹೇಳಿರುವುದರಿಂದ ಜನತೆ ಆತಂಕವಿಲ್ಲದೆ ಖರೀದಿ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News