ಮದುವೆ ಮುಂದೂಡಿ ಕೊರೋನ ಪೀಡಿತರ ಚಿಕಿತ್ಸೆಯಲ್ಲಿ ನಿರತ ಯುವ ವೈದ್ಯೆ ಡಾ. ಶಿಫಾ

Update: 2020-04-01 11:00 GMT

ತಿರುವನಂತಪುರಂ, ಎ 1 : ತನ್ನ ಮದುವೆಯನ್ನು ಮುಂದೂಡಿ ಕೊರೋನ ಪೀಡಿತರಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿರುವ ಯುವ ವೈದ್ಯೆಯೊಬ್ಬರನ್ನು ಇಡೀ ಕೇರಳ ಕೊಂಡಾಡುತ್ತಿದೆ. 

ಕಣ್ಣೂರಿನ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಸೇವಾ ನಿರತರಾಗಿರುವ 23 ವರ್ಷದ ಹೌಸ್ ಸರ್ಜನ್ ಡಾ. ಶಿಫಾ ಎಂ ಮೊಹಮ್ಮದ್ ಅವರೇ ಆ ಕಿರಿಯ ವೈದ್ಯೆ. 

ಡಾ. ಶಿಫಾ ಮಾರ್ಚ್ 29ರಂದು ದುಬೈ ಮೂಲದ ಯುವ ಉದ್ಯಮಿಯೊಬ್ಬರನ್ನು ವರಿಸಬೇಕಾಗಿತ್ತು. ಮದುವೆಗೆ ಎಲ್ಲ ತಯಾರಿ ನಡೆದಿತ್ತು. ಆದರೆ ಆ ನಡುವೆ ಕೊರೋನ ಮಾರಿ ರಾಜ್ಯವನ್ನು ಆಕ್ರಮಿಸಿಕೊಂಡು ಬಿಟ್ಟಿದೆ. ಈ ಹೊತ್ತಲ್ಲಿ ಮದುಮಗಳ ಅಲಂಕಾರದಲ್ಲಿ ಮಿಂಚುತ್ತಿರಬೇಕಾಗಿದ್ದ ಡಾ. ಶಿಫಾ ಈಗ ಕೊರೊನ ಚಿಕಿತ್ಸೆ ನೀಡುವ ವೈದ್ಯರು ಹಾಕಿಕೊಳ್ಳುವ ವಿಶೇಷ ಪೆರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್ ಧರಿಸಿಕೊಂಡು ಆಸ್ಪತ್ರೆಯಲ್ಲಿ ಬಿಡುವಿಲ್ಲದ ಸೇವೆಯಲ್ಲಿ ನಿರತರಾಗಿದ್ದಾರೆ. 

"ಮದುವೆಯನ್ನು ಮುಂದೂಡಬಹುದು. ಆದರೆ ಕಾಯಿಲೆ ಬಿದ್ದವರ ಚಿಕಿತ್ಸೆಯನ್ನಲ್ಲ. ಹಾಗಾಗಿ ನನ್ನ ಮದುಮಗ ಹಾಗು ಅವರ ಮನೆಯವರಿಗೆ ವಿಷಯ ತಿಳಿಸಿದ ಕೂಡಲೇ ಅವರು ತಕ್ಷಣ ಒಪ್ಪಿಗೆ ನೀಡಿದರು" ಎಂದು ಡಾ. ಶಿಫಾ ಹೇಳಿದ್ದಾರೆ. 

"ಪ್ರತಿ ಯುವತಿಗೆ ಆಕೆಯ ಮದುವೆ ಬಹಳ ಮುಖ್ಯವಾದುದು. ಆದರೆ ನನ್ನ ಮಗಳು ಆಕೆಯ ವೈಯಕ್ತಿಕ ಸುಖಕ್ಕಿಂತ ಸಾಮಾಜಿಕ ಜವಾಬ್ದಾರಿಗೆ ಆದ್ಯತೆ ನೀಡಿದ್ದಾಳೆ. ಆಕೆ ತನ್ನ ಮದುವೆಯನ್ನು ಮುಂದೂಡುವ ಬಗ್ಗೆ ಹೇಳಿದಾಗ ನಾವೆಲ್ಲರೂ ಒಪ್ಪಿಗೆ ಕೊಟ್ಟೆವು" ಎಂದು ಡಾ. ಶಿಫಾ ಅವರ ತಂದೆ ಹಾಗು ಕ್ಯಾಲಿಕಟ್ ಎಲ್ಡಿಎಫ್ ಜಿಲ್ಲಾ ಸಂಚಾಲಕ ಮುಕ್ಕಮ್ ಮೊಹಮ್ಮದ್ ಹೇಳಿದ್ದಾರೆ. 

"ನಮ್ಮ ವರ ಅನಸ್ ಮೊಹಮ್ಮದ್ ಕೂಡ ತಕ್ಷಣ ಒಪ್ಪಿಗೆ ನೀಡಿದ್ದಾರೆ. ನಾನು ಸಮಾಜ ಸೇವಕ. ನನ್ನ ಪತ್ನಿ ಶಿಕ್ಷಕಿ. ಹಾಗಾಗಿ ನನ್ನ ಮಗಳೂ ಸಮಾಜ ಸೇವಾ ಮನೋಭಾವ ತೋರಿಸಿರುವುದು ಸಂತಸ ತಂದಿದೆ" ಎಂದು ಮೊಹಮ್ಮದ್ ಹೇಳಿದ್ದಾರೆ. ಅವರ ದೊಡ್ಡ ಮಗಳೂ ವೈದ್ಯರಾಗಿದ್ದು ಕ್ಯಾಲಿಕಟ್ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಡಾ. ಶಿಫಾ ಅವರನ್ನು ಮಾಧ್ಯಮಗಳು ಮಾತನಾಡಿಸಿದಾಗ ಮೊದಲು ಈ ಬಗ್ಗೆ ಹೇಳಲು ನಿರಾಕರಿಸಿದ ಆಕೆ ಬಳಿಕ "ನಾನು ಮಾಡುತ್ತಿರುವುದು ತೀರಾ ಅಸಾಮಾನ್ಯವೇನಲ್ಲ. ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಅಷ್ಟೇ. ನನ್ನ ಹಾಗೆ ತಮ್ಮ ವೈಯಕ್ತಿಕ ಕೆಲಸಗಳನ್ನು ಮುಂದೂಡಿದವರು ಬಹಳಷ್ಟು ಜನ ಇದ್ದಾರೆ. ನಾನೂ ಅವರ ಪೈಕಿ ಒಬ್ಬಳು ಅಷ್ಟೇ. ನನ್ನ ಮದುವೆ ದಿನ ನಾನು ವಿಶೇಷ ಸುರಕ್ಷತಾ ಉಡುಗೆ ಧರಿಸಿ ಆಸ್ಪತ್ರೆಯಲ್ಲಿದ್ದೆ. ಅದು ನಾನು ಈವರೆಗೆ ಧರಿಸಿದ ಅತ್ಯುತ್ತಮ ಉಡುಗೆ ಎಂದು ನನ್ನ ಮಿತ್ರರು ತಮಾಷೆ ಮಾಡಿದ್ದರು" ಎಂದು ಹೇಳಿದ್ದಾರೆ. 

ಅಂದ ಹಾಗೆ ಶಿಫಾ ಎಂಬ ಉರ್ದು ಪದದ ಅರ್ಥ 'ಗುಣಪಡಿಸುವುದು' ಎಂದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News