ಪ್ರಧಾನಿ ಕಾರ್ಯಾಲಯಕ್ಕೆ ಮಾಡಿದ ಒಂದು ಟ್ವೀಟ್ ಅಜ್ಜಿಯ ಪ್ರಾಣವುಳಿಸಿತು ...

Update: 2020-04-01 11:34 GMT

ಹೊಸದಿಲ್ಲಿ: ಮಂಗಳವಾರ ಯುವಕನೊಬ್ಬ ಪ್ರಧಾನಿ ಕಾರ್ಯಾಲಯಕ್ಕೆ ಮಾಡಿದ ಟ್ವೀಟ್ ಒಂದು ಚಿಂತಾಜನಕ ಸ್ಥಿತಿಯಲ್ಲಿದ್ದ ಆತನ 85 ವರ್ಷದ ಅಜ್ಜಿಯ ಪ್ರಾಣ ಉಳಿಸಿದೆ.

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಕುಗ್ರಾಮವೊಂದರಲ್ಲಿ ಯುವಕ ಮಣಿಕ್ ಶರ್ಮ ಎಂಬಾತನ ಅಜ್ಜಿ ಏಕಾಂಗಿಯಾಗಿ ವಾಸವಾಗಿದ್ದರು. "ರಜೌರಿಯ ಕುಗ್ರಾಮವೊಂದರಲ್ಲಿ ಸಾಯುವ ಸ್ಥಿತಿಯಲ್ಲಿರುವ ನನ್ನ ಅಜ್ಜಿಗೆ ಸಹಾಯ ಬೇಕು. ಈ ಲಾಕ್‍ಡೌನ್ ನಡುವೆ ಯಾವುದೇ ವೈದ್ಯಕೀಯ ಸೌಲ್ಯಗಳಿಲ್ಲ. ಆಕೆ ಒಬ್ಬರೇ ಇದ್ದಾರೆ, ದಯವಿಟ್ಟು ಆಕೆಯನ್ನು ರಕ್ಷಿಸಿ'' ಎಂದು ಗಡಿಭಾಗದಲ್ಲಿರುವ ಪೂಂಛ್ ಜಿಲ್ಲೆಯಿಂದ ಶರ್ಮ ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿದ್ದರು.

ಈ ಸಂದೇಶ ದೊರೆಯುತ್ತಲೇ ಸೇನೆಯು ಸೇನಾ ವೈದ್ಯರೊಬ್ಬರನ್ನು ಗ್ರಾಮಕ್ಕೆ ಕಳುಹಿಸಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.

ರಜೌರಿಯ ದಯಾಲ ಗ್ರಾಮದ ಸಿಯಾಲ್ಸುಯ್  ಎಂಬಲ್ಲಿಗೆ  ವೈದ್ಯರು ಹಾಗೂ ಇತರ ಸೇನಾ ಸಿಬ್ಬಂದಿ ಧಾವಿಸಿ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಆಕೆಯನ್ನು ರಜೌರಿಯ ಮಿಲಿಟರಿ ಆಸ್ಪತ್ರೆಗೆ ಸಾಗಿಸಿದರು. ವೃದ್ಧೆ ಹೃದ್ರೋಗ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ವೃದ್ಧೆ ಈಗ ಅಪಾಯದಿಂದ ಪಾರಾಗಿದ್ದಾರೆ, ಆಕೆ ಗುಣಮುಖರಾದ ಕೂಡಲೇ ಆಕೆಯ ಕುಟುಂಬದ ಜತೆಗೆ ಕಳುಹಿಸಲಾಗುವುದು ಎಂದು ಲೆ. ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News