ಕೋವಿಡ್-19ನಿಂದ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ ಕುಟುಂಬಕ್ಕೆ 1 ಕೋ.ರೂ. ಪರಿಹಾರ

Update: 2020-04-01 16:17 GMT

ಹೊಸದಿಲ್ಲಿ, ಎ.1: ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ ದೇಶವನ್ನು ರಕ್ಷಿಸುತ್ತಿರುವ ಯೋಧರಿಗಿಂತ ಕಡಿಮೆಯಲ್ಲ ಎಂದು ಬುಧವಾರ ಇಲ್ಲಿ ಹೇಳಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು,ಆರೋಗ್ಯ ಕಾರ್ಯಕರ್ತರು ಕೊರೋನ ವೈರಸ್ ಪ್ರಕರಣಗಳನ್ನು ನಿರ್ವಹಿಸುವಾಗ ಸೋಂಕಿಗೆ ಗುರಿಯಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಲಕ್ಷ ರೂ.ಪರಿಹಾರವನ್ನು ನೀಡುವುದಾಗಿ ಘೋಷಿಸಿದರು.

 ಯುದ್ಧದ ಸಂದರ್ಭದಲ್ಲಿ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಾರೆ. ಇಡೀ ದೇಶವು ಅವರಿಗೆ ಋಣಿಯಾಗಿರುತ್ತದೆ. ಇಂದು ನೀವು (ಆರೋಗ್ಯ ಕಾರ್ಯಕರ್ತರು) ಮಾಡುತ್ತಿರುವ ಕೆಲಸ ಯೋಧರ ಕೆಲಸಕ್ಕಿಂತ ಕಡಿಮೆಯೇನಲ್ಲ. ಈ ದೇಶದ ಜನರನ್ನು ರಕ್ಷಿಸಲು ನೀವು ನಿಮ್ಮ ಜೀವವನ್ನು ಅಪಾಯಕ್ಕೊಡ್ಡುತ್ತಿದ್ದೀರಿ ಎಂದ ಅವರು, ದೇಶದ ರಕ್ಷಣಾ ಕಾರ್ಯದಲ್ಲಿ ಹುತಾತ್ಮರಾದರೆ ಅಂತಹ ಯೋಧರ ಕುಟುಂಬಕ್ಕೆ ಒಂದು ಕೋ.ರೂ.ಗಳನ್ನು ನೀಡುವುದಾಗಿ ದಿಲ್ಲಿ ಸರಕಾರವು ಈ ಹಿಂದೆ ಪ್ರಕಟಿಸಿದೆ.

ಇಂದು ಗೌರವದ ಸಂಕೇತವಾಗಿ,ದುರದೃಷ್ಟವಶಾತ್ ಕೋವಿಡ್-19 ರೋಗಿಗಳಿಗೆ ಸೇವೆ ಸಲ್ಲಿಸುವಾಗ ವೈದ್ಯ ಅಥವಾ ನರ್ಸ್, ಯಾವುದೇ ಆರೋಗ್ಯ ಸಿಬ್ಬಂದಿ ಮೃತಪಟ್ಟರೆ,ಅವರು ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರಕ್ಕೆ ಸೇರಿರಲಿ, ಅವರ ಕುಟುಂಬಗಳಿಗೆ ಒಂದು ಕೋ.ರೂ.ನೀಡುವುದಾಗಿ ಪ್ರಕಟಿಸುತ್ತಿದ್ದೇನೆ ಎಂದರು.

‘ಕೋವಿಡ್-19 ಕರ್ತವ್ಯನಿರತ ಕೆಲವು ವೈದ್ಯಕೀಯ ವೃತ್ತಿಪರರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದವನ್ನೂ ನಡೆಸಿದ್ದು,ಅವರ ಧೈರ್ಯ ಮತ್ತು ಅರ್ಪಣಾ ಮನೋಭಾವಕ್ಕೆ ನನ್ನ ನಮನಗಳು. ಅವರಿಗೆ ಸಂಪೂರ್ಣ ಸರಕಾರಿ ಬೆಂಬಲದ ಭರವಸೆಯನ್ನು ನೀಡಿದ್ದೇನೆ. ಅವರು ಕೆಲವು ಅತ್ಯುತ್ತಮ ಸಲಹೆಗಳನ್ನು ನೀಡಿದ್ದು,ಅವುಗಳನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗುವುದು ಎಂದೂ ಕೇಜ್ರಿವಾಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News