ರಾಜ್ಯಗಳ ಜೊತೆ ಚರ್ಚಿಸದೆ ಇದ್ದುದೇ ಲಾಕ್ ಡೌನ್ ನಂತರದ ಗೊಂದಲಕ್ಕೆ ಕಾರಣ: ಛತ್ತೀಸ್ ಗಢ ಸಿಎಂ

Update: 2020-04-01 16:46 GMT

ಹೊಸದಿಲ್ಲಿ, ಎ.1: ಪ್ರಧಾನಮಂತ್ರಿಯವರು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಲ್ಲಿ ಲಾಕ್‌ಡೌನ್ ಬಳಿಕ ಉಂಟಾದ ಗೊಂದಲವನ್ನು ನಿವಾರಿಸಬಹುದಿತ್ತು ಎಂದು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳಿದ್ದಾರೆ.

ಜನತೆ ತೀವ್ರ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೇಂದ್ರ ಸರಕಾರ ಆದೇಶ ಹೊರಡಿಸಬಹುದು. ಆದರೆ ಆ ಆದೇಶವನ್ನು ಅನುಷ್ಟಾನಗೊಳಿಸುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿರುತ್ತದೆ ಎಂದು thewire.in ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸುವ ಮುನ್ನ ಕೇಂದ್ರ ಸರಕಾರ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಬೇಕಿತ್ತು. ಆಗ ನಾವು ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಎಲ್ಲಾ ರಾಜ್ಯಗಳೂ ಪರಸ್ಪರ ಸಮಾಲೋಚಿಸಿ ಅಗತ್ಯವಿರುವ ವಿಷಯಗಳ ಪಟ್ಟಿ ಮಾಡುತ್ತಿದ್ದೆವು. ಆದರೆ ‘ಕೇಂದ್ರ ಸರಕಾರ’ ಈ ಬಗ್ಗೆ ಗಮನ ಹರಿಸಲಿಲ್ಲ . ಲಾಕ್‌ಡೌನ್ ಘೋಷಣೆಯ ಬಳಿಕವೇ ಕೇಂದ್ರ ಸರಕಾರ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದರು. ಆದರೆ ಈ ವೀಡಿಯೊ ಕಾನ್ಫರೆನ್ಸ್‌ನಲ್ಲೂ ಕೆಲವೇ ಮುಖ್ಯಮಂತ್ರಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ದೊರಕಿದೆ . ಉಳಿದಂತೆ ಪ್ರಧಾನಿ ಅಥವಾ ಕೇಂದ್ರ ಸರಕಾರದ ಅಧಿಕಾರಿಗಳು ಮಾತ್ರ ಮಾತನಾಡಿದ್ದಾರೆ ಎಂದವರು ಹೇಳಿದರು.

ಕೇಂದ್ರ ಸರಕಾರ ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದರೆ ದೇಶದಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಗ್ರಾಮಕ್ಕೆ ವಾಪಸಾಗುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ . ವಲಸೆ ಕಾರ್ಮಿಕರು ತಮ್ಮ ಗ್ರಾಮಕ್ಕೆ ತೆರಳಲು ಮುಂದಾಗಿರುವುದು ಲಾಕ್‌ಡೌನ್ ಪ್ರಕ್ರಿಯೆಯ ಉದ್ದೇಶವನ್ನೇ ವಿಫಲಗೊಳಿಸಿದೆ ಎಂದವರು ಹೇಳಿದ್ದಾರೆ. ಜನರನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದು, ಅವರಿಗೆ ಆಹಾರ ಒದಗಿಸುವ ಮೂಲಕ ಯೋಗಕ್ಷೇಮ ನೋಡಿಕೊಳ್ಳುವುದು ಮುಂತಾದ ಎಲ್ಲಾ ಕಾರ್ಯಗಳನ್ನೂ ರಾಜ್ಯ ಸರಕಾರಗಳೇ ಮಾಡಬೇಕಿದೆ. ಕೇಂದ್ರ ಸರಕಾರ ಕೊರೊನ ವೈರಸ್ ಪರೀಕ್ಷೆಯ ಕಿಟ್‌ಗಳನ್ನು ಮಾತ್ರ ಒದಗಿಸಿದೆ ಎಂದು ಬಾಘೇಲ್ ಅಸಮಾಧಾನ ಸೂಚಿಸಿದರು.

ಮಾರ್ಚ್ 24ರಂದು ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ದೇಶದೆಲ್ಲೆಡೆಯ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News