ತೆರಿಗೆ ಪಾವತಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಣೆಗೆ ಅಧ್ಯಾದೇಶ

Update: 2020-04-01 17:33 GMT

ಹೊಸದಿಲ್ಲಿ, ಎ.1: ಆದಾಯ ತೆರಿಗೆ, ಸರಕು ಹಾಗೂ ಸೇವಾತೆರಿಗೆ, ಕಸ್ಟಮ್ಸ್ ಮತ್ತು ಕೇಂದ್ರೀಯ (ಸೆಂಟ್ರಲ್) ತೆರಿಗೆಗಳ ರಿಟರ್ನ್ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸುವ ಆಧ್ಯಾದೇಶವನ್ನು ಕೇಂದ್ರ ಸರಕಾರವು ಮಂಗಳವಾರ ಜಾರಿಗೊಳಿಸಿದೆ.

ಕೊರೋನ ವೈರಸ್ ಹಾವಳಿ ತಡೆಯಲು ರಾಷ್ಟ್ರಾದ್ಯಂತ ಲಾಕ್ ಡೌನ್ ಹೇರಲಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಬಹುತೇಕ ತಟಸ್ಥಗೊಂಡಿರುವುದರಿಂದ ಕೇಂದ್ರ ಸರಕಾರ ಈ ಕ್ರಮವನ್ನು ಕೈಗೊಂಡಿದೆ.

2020ರ ತೆರಿಗೆ ಹಾಗೂ ಇತರ ಕಾನೂನುಗಳ (ನಿರ್ದಿಷ್ಟ ನಿಯಮಗಳ ಸಡಿಲಿಕೆ)ಸುಗ್ರೀವಾಜ್ಞೆ ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿಹಾಕಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಕೊರೋನ ವೈರಸ್ ಹಾವಳಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ತೆರಿಗೆ ರಿಟರ್ನ್ ಸಲ್ಲಿಕೆಗೆ ಇರುವ ವಿವಿಧ ಶಾಸನಾತ್ಮಕ ಅವಶ್ಯಕತೆಗಳನ್ನು ಹಾಗೂ ನಿಯಮಗಳನ್ನು ಸಡಿಲಿಕೆ ಮಾಡುವುದಾಗಿ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಾರ್ಚ್ 24ರಂದು ಪ್ರಕಟಿಸಿದ್ದರು.

ಆ ಪ್ರಕಾರ 2018-19ರ ಸಾಲಿನ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಮತ್ತು ಪಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲು ಇರುವ ಅಂತಿಮ ದಿನಾಂಕವನ್ನು ಜೂನ್ 30ಕ್ಕೆ ವಿಸ್ತರಿಸಿತ್ತು. ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳ ಕೇಂದ್ರೀಯ ಅಬಕಾರಿ ತೆರಿಗೆ ರಿಟರ್ನ್ ಸಲ್ಲಿಕೆಯ ಅಂತಿಮ ದಿನಾಂಕವನ್ನೂ ಕೂಡಾ ಅದು ಜೂನ್ 30ಕ್ಕೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News