ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತಗೊಳಿಸಿದ ಕೇಂದ್ರ

Update: 2020-04-01 17:53 GMT

ಹೊಸದಿಲ್ಲಿ, ಎ.1: ಸುಕನ್ಯಾ ಯೋಜನೆ, ಎನ್‌ಎಸ್‌ಸಿ, ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರಕಾರ 1.4% ರಷ್ಟು  ಕಡಿತಗೊಳಿಸಿದೆ.

 2020-21ರ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ (ಎ.1ರಿಂದ - ಜೂನ್ 30ರ ಅವಧಿ ) ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ ಎಂದು ವಿತ್ತ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಇದರೊಂದಿಗೆ 1ರಿಂದ 3 ವರ್ಷದ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರವನ್ನು 6.9%ದಿಂದ 5.5%ಕ್ಕೆ ಇಳಿಸಲಾಗಿದೆ. 5 ವರ್ಷದ ಅವಧಿಯ ಠೇವಣಿಯ ಬಡ್ಡಿದರ ಈಗಿರುವ 7.7%ದಿಂದ 6.7%ಕ್ಕೆ ಇಳಿಸಲಾಗಿದೆ. 5 ವರ್ಷದ ಆವರ್ತಕ ಠೇವಣಿ(ರಿಕರಿಂಗ್ ಡಿಪಾಸಿಟ್)ಯ ಮೇಲಿನ ಬಡ್ಡಿದರವನ್ನು 5.8%ಕ್ಕೆ ಇಳಿಸಲಾಗಿದೆ. ಹಿರಿಯ ನಾಗರಿಕರ 5 ವರ್ಷದ ಉಳಿತಾಯ ಯೋಜನೆಯ ಮೇಲಿನ ಬಡ್ಡಿದರವನ್ನು 1.2% ಕಡಿಮೆಗೊಳಿಸಿ 7.4%ಕ್ಕೆ ನಿಗದಿಗೊಳಿಸಲಾಗಿದೆ. ಆದರೆ ಉಳಿತಾಯ ಠೇವಣಿಯ ಮೇಲಿನ ಬಡ್ಡಿದರವನ್ನು 4% ದರದಲ್ಲೇ ಮುಂದುವರಿಸಲಾಗಿದೆ. ಹೆಣ್ಣು ಮಕ್ಕಳಿಗೆ ಇರುವ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು 8.4%ದಿಂದ 7.6%ಕ್ಕೆ ಇಳಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಮತ್ತು ರಾಷ್ಟ್ರೀಯ ಉಳಿತಾ ಪ್ರಮಾಣಪತ್ರ(ಎನ್‌ಎಸ್‌ಸಿ) ಮೇಲಿನ ಬಡ್ಡಿದರವನ್ನು ಕ್ರಮವಾಗಿ 7.1% ಮತ್ತು 6.8%ಕ್ಕೆ ಇಳಿಸಲಾಗಿದೆ.

ಕಿಸಾನ್ ವಿಕಾಸ್ ಪತ್ರದ ಬಡ್ಡಿದರವನ್ನು 6.9%ಕ್ಕೆ ಇಳಿಸಲಾಗಿದ್ದು ವಾಯಿದೆ ಅವಧಿಯನ್ನು 113 ತಿಂಗಳಿನಿಂದ 124 ತಿಂಗಳಿಗೆ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News